From Wikipedia, the free encyclopedia
ಜಂಪ್ಸೂಟ್ ಎನ್ನುವುದು ಮಹಿಳೆಯರ ವಸ್ತ್ರವಿನ್ಯಾಸಗಳಲ್ಲಿನ ಒಂದು ವಿಧ. ಇದರ ವಿಶೇಷತೆ ಎಂದರೆ, ಸಂಪೂರ್ಣ ಉಡುಪು ಒಂದೇ ಬಟ್ಟೆಯ ತುಣುಕಿನಲ್ಲಿ ಮಾಡಲ್ಪಟ್ಟಿರುತ್ತದೆ. ಮುಡಿಯಿಂದ ಪಾದದವರೆಗೆ ಒಂದೇ ಬಟ್ಟೆಯ ತುಣುಕಿನಲ್ಲಿ ಉಡುಪನ್ನು ತಯಾರಿಸಿರುತ್ತಾರೆ. ಕೈ, ಕಾಲು ಮತ್ತು ತೋಳುಗಳಿಗೆಂದು ಪ್ರತ್ಯೇಕ ಬಟ್ಟೆಯನ್ನು ಹೊಲಿದಿರುವುದಿಲ್ಲ ಮತ್ತು ಉಡುಪು ಒಂದಕ್ಕಿಂತ ಹೆಚ್ಚು ಭಾಗಗಳಾಗಿ ವಿಂಗಡಿಸಿರುವುದಿಲ್ಲ. ಜಂಪ್ ಸೂಟ್ಗಳು ಪ್ಯಾರಾಚೂಟಿಸ್ಟ್ಗಳು ಬಳಸುವ ಕ್ರಿಯಾತ್ಮಕ ಒನ್-ಪೀಸ್ ಉಡುಪಾಗಿದೆ.
ಸ್ಕೈಡೈವರ್ಗಳ ಜಂಪ್ಸೂಟ್ಗಳು ಎತ್ತರದ ಪ್ರದೇಶಗಳಲ್ಲಿನ ತಂಪಾದ ತಾಪಮಾನದಿಂದ ದೇಹವನ್ನು ನಿರೋಧಿಸಲು ಮತ್ತು ಅಪಾಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಸರಳ ಉಡುಪುಗಳಾಗಿವೆ. ಇಂದು ಈ ಉಡುಪುಗಳು ಇತರ ಉಪಯೋಗಕ್ಕೂ ಯೋಗ್ಯವಾಗಿವೆ. ಜಂಪ್ಸೂಟ್ನ ಹಿಂಭಾಗದಲ್ಲಿ ತೆರೆಯುವಿಕೆಯ ವ್ಯವಸ್ಥೆ ಇಲ್ಲದಿದ್ದರೆ ("ಡ್ರಾಪ್ ಸೀಟ್"), ಸ್ನಾನಗೃಹದ ಬಳಕೆಗಾಗಿ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅವಶ್ಯಕವಾಗಿರುತ್ತದೆ.
೧೯೬೦ ರ ಆಸುಪಾಸಿನಲ್ಲಿ ಜಂಪ್ಸೂಟ್ಸ್ನ್ನು ಕೆಲವು ಅವಶ್ಯಕ ಸಂದರ್ಭಗಳಲ್ಲಿ ಮಾತ್ರ ಧರಿಸುತ್ತಿದ್ದರು. ನಂತರದ ದಿನಗಳಲ್ಲಿ ಜಗತ್ತಿನ ಜನಪ್ರಿಯ ಹಾಡುಗಾರರು ಮತ್ತು ಸಂಗೀತ ವಾದ್ಯಗಳ ಬ್ಯಾಂಡಿನವರು ವೇದಿಕೆಗಳಲ್ಲಿ ಧರಿಸಲು ಆರಂಭಿಸಿದರು. ಕಪ್ಪು ಬಣ್ಣದಿಂದ ಕೂಡಿದ ಚರ್ಮದಿಂದ ಮಾಡಲ್ಪಟ್ಟ ಜಂಪ್ಸೂಟ್ಸನ್ನು ‘ಸೂಜಿ ಕ್ವಾಂಟ್ರೋ'( ಅಮೆರಿಕಾದ ಜನಪ್ರಿಯ ಹಾಡುಗಾರ್ತಿ ಮತ್ತು ನಟಿ) ತನ್ನ ಎಲ್ಲ ಪ್ರದರ್ಶನದಲ್ಲೂ ಧರಿಸಿದ್ದು ಪ್ರಪಂಚದಾದ್ಯಂತ ಜಂಪ್ಸೂಟ್ಸ್ ಪ್ರಸಿದ್ದ ಆಗಲು ನೆರವಾಯಿತು. ದೂರದರ್ಶನದ ವಾರ್ತಾಗಾರರಾಗಿದ್ದ ‘ಏಪ್ರಿಲ್ ಓನೀಲ್' ಯಾವಾಗಲೂ ಹಳದಿ ಬಣ್ಣದ ಜಂಪ್ಸೂಟ್ಸ್ ಧರಿಸುತ್ತಿದ್ದರು.
ಮೊಟ್ಟಮೊದಲ ಬಾರಿಗೆ ಜಂಪ್ಸೂಟ್ಸ್ ಎಂಬ ವಸ್ತ್ರವಿನ್ಯಾಸವನ್ನು ಪರಿಚಯಿಸಿದವರು ‘ಆಕಾಶಸಾರಥಿ'(ಸ್ಕೈ ಡ್ರೈವರ್)ಗಳು. ೧೯೩೦ ರ ದಶಕದಲ್ಲಿ, ಫ್ಯಾಷನ್ ಡಿಸೈನರ್ ಎಲ್ಸಾ ಶಿಯಾಪರೆಲ್ಲಿ ಮಹಿಳೆಯರಿಗೆ ಜಂಪ್ಸೂಟ್ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಆಕೆಯ ವಿನ್ಯಾಸಗಳು ಭಾರಿ ಚರ್ಚೆಗೆ ಕಾರಣವಾಗಿತ್ತು, ಆದರೆ ಅದನ್ನು ಕೆಲವರು ಮಾತ್ರ ಧರಿಸುತ್ತಿದ್ದರು. ನಂತರ ೧೯೪೦ ರ ದಶಕದ ಮಧ್ಯಭಾಗದಲ್ಲಿ ಅಮೇರಿಕನ್ ಡಿಸೈನರ್ ವೆರಾ ಮ್ಯಾಕ್ಸ್ವೆಲ್ ಅವರಿಂದ ಸ್ಪೋರ್ಟಿ ಶೈಲಿಗಳು ಬಂದವು. ಇದು ಜನಪ್ರಿಯವಾಗಿತ್ತು. ಪ್ಯಾರಾಚ್ಯೂಟಿಸ್ಟ್ಗಳು ಕೆಲಸಕ್ಕೆ ಸರಿಯಾಗಿ ಹೊಂದಿಕೊಳ್ಳುವ ಜಂಪ್ಸೂಟ್ಸ್ಗಳನ್ನು ಉಪಯೋಗಿಸಲು ಆರಂಭಿಸಿದರು. ಎತ್ತರದ ಪ್ರದೇಶಗಳಿಂದ ಆಕಾಶದಲ್ಲಿ ಹಾರಾಡುವ ಸಮಯದಲ್ಲಿ ಈ ವಸ್ತ್ರವಿನ್ಯಾಸ ಬಹಳ ಸಹಕಾರಿಯಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಸಹಕಾರಿ ಉಡುಪು ಎಂದು ಪರಿಗಣಿಸುತ್ತಾರೆ. ಸುಲಭವಾಗಿ ತೊಳೆಯಲು ಹಾಗೂ ಧರಿಸಲು ಈ ಉಡುಪು ತುಂಬ ಉಪಯುಕ್ತ.
ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಂಪ್ಸೂಟ್ಗಳನ್ನು ಮಹಿಳೆಯರು ತಮ್ಮ ಉಪಯುಕ್ತತೆಗಾಗಿ ಧರಿಸುತ್ತಿದ್ದರು. ೧೯೫೦ ರ ದಶಕದಲ್ಲಿ, ಬೋನಿ ಕ್ಯಾಶಿನ್ ಅವರಂತಹ ಅಮೇರಿಕನ್ ವಿನ್ಯಾಸಕರು ಸಂಜೆಯ ಜಂಪ್ಸೂಟ್ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಆದರೆ ಜಂಪ್ಸೂಟ್ಗಳು ಹಗಲು ಮತ್ತು ಸಂಜೆಯ ಉಡುಗೆಯಾಗಿ ಜನಪ್ರಿಯವಾಗುವುದಕ್ಕೆ ಇನ್ನೊಂದು ದಶಕ ಬೇಕಾಗಿತ್ತು. ಜಂಪ್ಸೂಟ್ ಮೊದಲ ಬಾರಿಗೆ ಸೆಪ್ಟೆಂಬರ್ ೧೯೬೪ ರಲ್ಲಿ ವೋಗ್ನಲ್ಲಿ ಕಾಣಿಸಿಕೊಂಡಿತು. ಗೈ ಲಾರೋಚೆ ಕಂದು ಬಣ್ಣದ ಜರ್ಸಿ ಜಂಪ್ಸೂಟ್ ಅನ್ನು ಸೀಲ್ಸ್ಕಿನ್ ಜಾಕೆಟ್ನೊಂದಿಗೆ ಜೋಡಿಸಿದ್ದರು ಮತ್ತು ಅದನ್ನು ಇರ್ವಿಂಗ್ ಪೆನ್ ಛಾಯಾಚಿತ್ರ ಮಾಡಿದರು. ಇದು ಕೆಲವೇ ತಿಂಗಳುಗಳಲ್ಲಿ ಜನಪ್ರಿಯ ಪ್ರವೃತ್ತಿಯಾಯಿತು ಮತ್ತು ಜನವರಿ ೧೯೬೫ ರಲ್ಲಿ ವೋಗ್ ಮಾದರಿಗಳಾಗಿ ಬಿಳಿ ಜರ್ಸಿಯಲ್ಲಿ ಎರಡು "ಮೂನ್ ಶಾಟ್" ಶೈಲಿಯ ಜಂಪ್ಸೂಟ್ಗಳು ಕಾಣಿಸಿಕೊಂಡವು.
೧೯೬೦ ರ ದಶಕ ಮತ್ತು ೧೯೭೦ ರ ದಶಕವು ಜಂಪ್ಸೂಟ್ಗಳಿಗೆ ಬಹಳ ಮುಖ್ಯವಾದ ವರ್ಷಗಳು. ಅವುಗಳನ್ನು ಕ್ರೀಡಾ ಉಡುಪುಗಳಾಗಿ ಮತ್ತು ಸಂಜೆಯ ಅಲಂಕಾರದ ವಿನ್ಯಾಸಗಳಾಗಿ ತಯಾರಿಸಲಾಯಿತು. ಜಂಪ್ಸೂಟ್ಗಳು ಪ್ರತಿ ವಿನ್ಯಾಸಕರ ವಿನ್ಯಾಸಗಳಲ್ಲಿ ಸ್ಥಾನವನ್ನು ಕಂಡುಕೊಂಡವು. ೧೯೭೦ ರ ದಶಕದಲ್ಲಿ ಜಂಪ್ಸೂಟ್ ಯುನಿಸೆಕ್ಸ್ ಉಡುಪಾಗಿತ್ತು. ಚೆರ್ ಮತ್ತು ಎಲ್ವಿಸ್ ತಮ್ಮ ವೇದಿಕೆಯ ಪ್ರದರ್ಶನದ ಸಮಯದಲ್ಲಿ ಸೊಗಸಾದ ಜಂಪ್ಸೂಟ್ಗಳನ್ನು ಧರಿಸಿದ್ದರು. ಪ್ರಸಿದ್ಧ ಅಮೇರಿಕನ್ ಡಿಸೈನರ್ ಜೆಫ್ರಿ ಬೀನ್ ಜಂಪ್ಸೂಟ್ ಅನ್ನು "ಮುಂದಿನ ಶತಮಾನದ ಬಾಲ್ಗೌನ್" ಎಂದು ಕರೆದರು, ಆದರೆ ಇದು ಮುಂದಿನ ದಶಕದಲ್ಲಿ ಫ್ಯಾಷನ್ನಿಂದ ಹೊರಗುಳಿಯಿತು. ನಿಕೋಲಸ್ ಗೆಸ್ಕ್ವಿಯರ್ ೨೦೦೨ ರಲ್ಲಿ ಅದನ್ನು ವಿಭಿನ್ನ ಬಟ್ಟೆಗಳು ಮತ್ತು ಮಾದರಿಗಳಲ್ಲಿ ವಿನ್ಯಾಸಗೊಳಿಸುವ ಮೂಲಕ ಅದನ್ನು ಮರಳಿ ತರಲು ಪ್ರಯತ್ನಿಸಿದರು. ನವೀಕರಿಸಿದ ಜಂಪ್ಸೂಟ್ ಮತ್ತೆ ಜನಪ್ರಿಯತೆಯನ್ನು ಗಳಿಸಿತು ಮತ್ತು ಆದ್ದರಿಂದ ಶೈಲಿಯನ್ನು ಮರುಪ್ರಾರಂಭಿಸಲಾಯಿತು.
ಆಕಾಶಯಾಮಿಗಳು ಮತ್ತು ವಿಮಾನ ಚಾಲಕರು ಕೆಲವೊಮ್ಮೆ ಇವನ್ನು ಧರಿಸುತ್ತಾರೆ. ಗುರುತ್ವಾಕರ್ಷಣೆಯಿಲ್ಲದ ಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸಲು ಇದು ಸಹಕಾರಿ ಹಾಗೂ ಅಗ್ನಿಶಾಮಕ ದಳದವರು ಅಗ್ನಿನಂದಿಸುವ ಕಾರ್ಯಗಳಲ್ಲಿ ಜಂಪ್ಸೂಟ್ಸ್ಗಳನ್ನು ಧರಿಸುತ್ತಾರೆ.[1] ಮೋಟರ್ ರೇಸಿಂಗ್ ಸ್ಪರ್ಧೆಯಲ್ಲಿ ಚಾಲಕರು, ಕ್ರೀಡಾಪಟುಗಳು, ಆಟೋಮೊಬೈಲ್ ಕಂಪನಿಗಳಲ್ಲಿನ ಕೆಲಸಗಾರರು ಇವನ್ನು ಧರಿಸುತ್ತಾರೆ. ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಹೊಂದಿಕೊಳ್ಳುವುದರಿಂದ ಕೆಲವು ಸಂಸ್ಥೆಗಳಲ್ಲಿ ಜಂಪ್ಸೂಟ್ಸ್ಗಳನ್ನು ನೌಕರರ ದಿನಿತ್ಯದ ಉಡುಪನ್ನಾಗಿ ಮಾಡಲಾಗಿದೆ. ಪ್ರಪಂಚದ ಹಲವೆಡೆ ಈ ನೀತಿಯನ್ನು ಕೆಲವು ಕಂಪನಿಗಳು ಅನುಸರಿಸುತ್ತಿವೆ. ಮೊದಲೆಲ್ಲಾ ಅಮೆರಿಕ ಹಾಗೂ ಕೆನಡಾದಂತಹ ಕೆಲವು ರಾಷ್ಟ್ರಗಳಲ್ಲಿ ಕಿತ್ತಳೆ ಬಣ್ಣದ ಜಂಪ್ಸೂಟ್ಗಳನ್ನು ಖೈದಿಗಳಿಗೆ ನೀಡುತ್ತಿದ್ದರು. ಸಲಿಸಾಗಿ ಗುರುತಿಸುವ ಮತ್ತು ವಿಂಗಡಿಸುವ ದೃಷ್ಟಿಯಿಂದ ಈ ಪದ್ಧತಿ ಅನುಸರಿಸುತ್ತಿದ್ದಾರೆ. ಸದ್ಯ ಕಪ್ಪು ಹಾಗೂ ಬಿಳಿ ಬಣ್ಣದ ಗೆರೆಗಳುಳ್ಳ ಬಟ್ಟೆಗಳನ್ನು ಈಗ ಕಿತ್ತಳೆ ಬಣ್ಣದ ಹೊರತಾಗಿ ಉಪಯೋಗಿಸುತ್ತಿದ್ದರು. ಸ್ವೀಡನ್ ಹಾಗೂ ಫಿನ್ಲ್ಯಾಂಡ್ಗಳಲ್ಲಿ ಕಲಿಯುತ್ತಿರುವ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅವರವರ ಕಾಲೇಜು ಮತ್ತು ವಿಭಾಗದ ಮೇಲೆ ಬಣ್ಣಬಣ್ಣದ ಜಂಪ್ಸೂಟ್ಸ್ಗಳನ್ನು ಧರಿಸುತ್ತಾರೆ.[2] ಅವುಗಳನ್ನು ವಿದ್ಯಾರ್ಥಿ ಬೈಲರ್ಸೂಟ್ಸ್ ಎಂದು ಕರೆಯಲಾಗುತ್ತದೆ. ನಾರ್ವೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ವರ್ಷದ ಮೇ ತಿಂಗಳಿನಲ್ಲಿ ೩ ವಾರಗಳಲ್ಲಿ ಜಂಪ್ಸೂಟ್ಸ್ಗಳನ್ನು ಹಾಕುತ್ತಾರೆ. ಆ ಸಂಪ್ರದಾಯವನ್ನು ಅವರು ರುಸ್ಸೆಪೈರಿಂಗ್ ಎಂದು ಕರೆಯುತ್ತಾರೆ. ಕೆಲವು ತಂಪು ವಾತಾವರಣಗಳುಳ್ಳ ದೇಶಗಳಾದ ಕೊರಿಯಾ, ಐಲ್ಯಾಂಡ್, ಹಿಮಾಲಯದಂತಹ ಪ್ರದೇಶಗಳಲ್ಲಿ ವಾಸಿಸುವ ಜನರು ಜಂಪ್ಸೂಟನ್ನು ದಿನನಿತ್ಯದ ಉಡುಪನ್ನಾಗಿ ಧರಿಸುತ್ತಾರೆ. ವಿಶೇಷವಾಗಿ ಸಣ್ಣ ಕಂದಮ್ಮಳನ್ನು ಚಳಿಯಿಂದ ಕಾಪಾಡಲು ಈ ಉಡುಪು ಬಹಳ ಸಹಕಾರಿ. ತಂಪುವಾತಾವರಣದ ಪ್ರದೇಶಗಳಲ್ಲಿ ಬಳಸುವ ಈ ಉಡುಪುಗಳನ್ನು ಸ್ನೋಸೂಟ್ಸ್ ಎಂದು ಕರೆಯುತ್ತಾರೆ. ಚಳಿಗಾಲದಲ್ಲಿ ಇವುಗಳ ಬೇಡಿಕೆ ಮತ್ತು ಬೆಲೆ ಎರಡೂ ದುಬಾರಿಯಾಗಿರುತ್ತದೆ.[3]
ವರ್ಷ ಉರುಳಿದಂತೆ ಪ್ಯಾಶನ್ ಲೋಕದಲ್ಲಿ ಜಂಪ್ಸೂಟ್ಗಳ ವಿನ್ಯಾಸ ಬದಲಾಗುತ್ತಿದೆ. ಒಂದೇ ಗಾರ್ಮೆಂಟ್ ಬಟ್ಟೆಯಿಂದ ತಯಾರಿಸುವ ಜಂಪ್ಸೂಟ್ಸ್ಗಳು ಎಲ್ಲ ವರ್ಗದ ಜನರಿಗೆ ಮತ್ತು ಎಲ್ಲ ರೀತಿಯ ದೇಹರೂಪಕ್ಕೆ ಹೊಂದಿಕೊಳ್ಳುತ್ತಿವೆ.[4] ‘ಒನ್ಸೈ' ಎಂಬ ವಸ್ತ್ರವಿನ್ಯಾಸ ೨೦೧೦ರ ಸುಮಾರಿನಲ್ಲಿ ಪ್ಯಾಶನ್ ಇಂಡ್ಸ್ಟ್ರಿಯನ್ನು ಪ್ರವೇಶಿಸಿತು, ೧೯ನೇ ಶತಮಾನದ ಆಸುಪಾಸಿನಲ್ಲಿ ಸಿನಿಮಾ, ಮನರಂಜನೆ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಕೆಲವು ಸಿನಿಮಾ ತಾರೆಯರು ಜಂಪ್ಸೂಟ್ಗಳನ್ನು ಬ್ರಾಂಡ್ ಆಗಿ ಧರಿಸಲು ಆರಂಭಿಸಿದರು.[5]
೧೯೬೦ ರಲ್ಲಿ ಜಂಪ್ಸೂಟ್ಗಳು ಪ್ಯಾಶನ್ ಲೋಕಕ್ಕೆ ಪ್ರವೇಶ ಪಡೆಯಿತು.[6] ಪ್ರಸಿದ್ಧ ಸಂಗೀತಗಾರರು ಹಾಗೂ ಹಾಡುಗಾರರು ಜಂಪ್ಸೂಟ್ಸ್ನ್ನು ವೇದಿಕೆಗಳಲ್ಲಿ ಧರಿಸಿ ಅದನ್ನು ವಸ್ತ್ರವಿನ್ಯಾಸದ ಬ್ರಾಂಡನ್ನಾಗಿ ಮಾಡಿದರು. ಎಲ್ವಿಸ್ ಪ್ರೀಸ್ಲೇ, ಮೀಕ್ ಜಾಗರ್, ದಿ ಹೂ, ಕ್ವೀನ್, ಫೀಡರ್, ಅಲ್ಪಾವಿಲ್ಲೊ, ಗೋಲ್ಡಪ್ರಾಪ್, ಆಲಿಯಾಹ, ಬ್ರಿಟ್ನೇ ಸ್ಪೀಯರ್ಸ್, ಪಿಂಕ್, ದೇವೊ, ಪೋಲಿಸಿಕ್ಸ್, ಸೈಸ್ ಗಲ್ರ್ಸ, ಕೋರ್ನ್ ಮತ್ತು ಸ್ಲೀಪ್ ನೋಟ್ ಮುಂತಾದವರು ಜಂಪ್ಸೂಟ್ಸ್ಗಳನ್ನು ವೇದಿಕೆ ಪ್ರದರ್ಶನದಲ್ಲಿ ಧರಿಸುತ್ತಿದ್ದರು. ಕ್ಯಾಟ್ಸೂಟ್ಸ್ ಅಥವಾ ಮೈಗಂಟಿಕೊಳ್ಳುವ ಹೊಳೆಯುವ ಜಂಪ್ಸೂಟ್ಗಳು ಆ ಕಾಲದಲ್ಲಿ ಜನಪ್ರಿಯವಾಗಿದ್ದವು.ಬ ಸ್ಕ್ರಬ್ಸ್ ಎಂಬ ಟಿವಿ ಸೀರೀಸ್ನಲ್ಲಿ ಬರುವ ಪಾತ್ರ ‘ಜನಿಟರ್' ಜಂಪ್ಸೂಟ್ಸ್ ಎಂದೆ ಪ್ರಖ್ಯಾತಿ ಪಡೆದಿತ್ತು.
೧೯೯೯-೨೦೦೦ರಲ್ಲಿ ಪ್ರಸಾರವಾಗುತ್ತಿದ್ದ ಟಿವಿ ಸೀರಿಸ್ ‘ಪ್ರೀಕ್ಸ್ ಆ್ಯಂಡ್ ಗ್ರೀಕ್ಸ್'ನ ‘ಲುಕ್ಸ್ ಆ್ಯಂಡ್ ಬುಕ್ಸ್'ಎಂಬ ಉಪಕಥೆಯಲ್ಲಿನ ಮುಖ್ಯ ಪಾತ್ರಧಾರಿ ‘ಬೆಬಿ ಬ್ಲೂ' ಜಂಪ್ಸೂಟ್ಸ್ನ ವಿಷಯದಿಂದ ಚರ್ಚೆಗೊಳಗಾಗಿದ್ದರು. ಪೋಲಿಷ್ ಅಂಬಾಸಿ ಎಂದೆ ಪ್ರಖ್ಯಾತಿ ಪಡೆದ, ಡೆವಿಡ್ ಸುಗಲ್ಕ್ಸಿ ಎಂಬ ಸಂಗೀತ ಕಲಾವಿದ ನೇರಪ್ರದರ್ಶನದಲ್ಲಿ ನಿಯೋನ ಹಳದಿ ಬಣ್ಣದ ಜಂಪ್ಸೂಟ್ಸ್ ಧರಿಸುತ್ತಿದ್ದರು. ಪೋರ್ಟಲ್ ವಿಡಿಯೋ ಗೇಮ್ ಸಿರೀಸ್ನಲ್ಲಿ ಬರುವ ಚೇಲ್ ಪಾತ್ರ ಕಿತ್ತಳೆ ಬಣ್ಣದ ಜಂಪ್ಸೂಟ್ಸ್ ಹಾಕಿರುತ್ತದೆ.
ಜಂಪ್ಸೂಟ್ಗಳಲ್ಲಿ ಅನೇಕ ರೀತಿಯ ವಸ್ತ್ರವಿನ್ಯಾಸವುಳ್ಳ ವಿಧಗಳನ್ನು ನೋಡಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.