ಟಾರ್ಡಿಗ್ರೇಡ್
From Wikipedia, the free encyclopedia
ಟಾರ್ಡಿಗ್ರೇಡ್ಗಳನ್ನು [1] ನೀರಿನ ಕರಡಿಗಳು ಅಥವಾ ಮೊಸ್ ಪಿಗ್ಲೆಟ್ಸ್ ಎಂದು ಕರೆಯುತ್ತಾರೆ. [2][3][4][5] ಇದು ಎಂಟು-ಕಾಲಿನ ವಿಭಜಿತ ಸೂಕ್ಷ್ಮ-ಪ್ರಾಣಿಗಳ ಫೈಲಮ್ ಆಗಿದೆ.[6][7] ೧೭೭೩ ರಲ್ಲಿ ಜರ್ಮನ್ ಪ್ರಾಣಿಶಾಸ್ತ್ರಜ್ಞ ಜೋಹಾನ್ ಆಗಸ್ಟ್ ಎಫ್ರೈಮ್ ಗೊಯೆಜ್ ಅವರು ಟಾರ್ಡಿಗ್ರೇಡ್ಗಳನ್ನು ಮೊದಲ ಬಾರಿಗೆ ವರ್ಣಿಸಿದರು. ಅವರು ಇವುಗಳನ್ನು ಕ್ಲೈನರ್ ವಾಸ್ಸೆರ್ಬರ್ಬರ್ ( ಅಂದರೆ ಸಣ್ಣ ನೀರಿನ ಕರಡಿ) ಎಂದು ಕರೆದರು. [8] ೧೭೭೭ ರಲ್ಲಿ, ಇಟಾಲಿಯನ್ ಜೀವಶಾಸ್ತ್ರಜ್ಞ ಲಾಝಾರೋ ಸ್ಪಲ್ಲಂಜನಿ ಅವರು ಟಾರ್ಡಿಗ್ರಾಡಾ, ಅಂದರೆ ನಿಧಾನಗತಿಯ ಹೆಜ್ಜೆಗಳು ಎಂದು ಹೆಸರಿಸಿದರು. [9]
ಟಾರ್ಡಿಗ್ರೇಡ್ಗಳು ಭೂಮಿಯ ಜೀವಗೋಳದಲ್ಲಿ, ಪರ್ವತ ತುದಿಗಳಿಂದ ಹಿಡಿದು ಆಳ ಸಮುದ್ರ ಮತ್ತು ಮಣ್ಣಿನ ಜ್ವಾಲಾಮುಖಿಗಳವರೆಗೆ, [10] ಮತ್ತು ಉಷ್ಣವಲಯದ ಮಳೆಕಾಡುಗಳಿಂದ ಅಂಟಾರ್ಕ್ಟಿಕ್ ವರೆಗೆ ಎಲ್ಲೆಡೆ ಕಂಡುಬರುತ್ತವೆ.[11] ಟಾರ್ಡಿಗ್ರೇಡ್ ಗಳು ಗುರುತಿಸಲಾಗಿರುವ ಅತ್ಯಂತ ಸ್ಥಿತಿಸ್ಥಾಪಕ ಪ್ರಾಣಿಗಳಲ್ಲಿ ಒಂದಾಗಿವೆ. ತೀವ್ರ ತಾಪಮಾನ, ತೀವ್ರ ಒತ್ತಡಗಳು (ಅಧಿಕ ಮತ್ತು ಕಡಿಮೆ ಎರಡೂ), ವಾಯು ಕೊರತೆ, ವಿಕಿರಣ, ನಿರ್ಜಲೀಕರಣ, ಮತ್ತು ಹಸಿವಿನಂತಹ ತೀವ್ರ ಪರಿಸ್ಥಿತಿಗಳಿಂದ ಬದುಕುಳಿಯಲು ಸಮರ್ಥವಾಗಿರುವ ಪ್ರಭೇದಗಳಲ್ಲಿ ಇವು ಒಂದಾಗಿವೆ. ಟಾರ್ಡಿಗ್ರೇಡ್ಗಳು ಹೊರಗಿನ ಪ್ರಪಂಚಕ್ಕೆ ಹೊಂದಿಕೊಂಡು ಕೂಡ ಬದುಕುತ್ತವೆ. ಆರ್ಥ್ರೋಪಾಡ್ಗಳು ಮತ್ತು ನೆಮಟೋಡ್ಗಳಂತಹ ಎಕ್ಡಿಸಿಸ್ನಿಂದ ಬೆಳೆಯುವ ಪ್ರಾಣಿಗಳನ್ನು ಒಳಗೊಂಡಿರುವ ಸೂಪರ್ ಫೈಲಮ್ ಎಕ್ಡಿಸೊಜೋವಾದ ಒಂದು ಭಾಗವಾದ ಫೈಲಮ್ ಟಾರ್ಡಿಗ್ರಾಡಾದಲ್ಲಿ ಸುಮಾರು ೧೩೦೦ ತಿಳಿದಿರುವ ಪ್ರಭೇದಗಳಿವೆ.[12] ಈ ಗುಂಪಿನ ಪ್ರಾಚೀನ ಸದಸ್ಯರು ಕ್ರಿಟೇಷಿಯಸ್ಗಳ (೧೪೫ ರಿಂದ ೬೬ ದಶಲಕ್ಷ ವರ್ಷಗಳ ಹಿಂದೆ) ಪಳೆಯುಳಿಕೆಗಳು ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತದೆ. ಆದರೆ ಇವುಗಳ ಒಂದು ವರ್ಗವು ಆಧುನಿಕ ರೂಪಕ್ಕೆ ಮಾರ್ಪಾಡಾಗಿದ್ದು, ಅವುಗಳು ೫೦೦ ಮಿಲಿಯನ್ ವರ್ಷಗಳ ಹಿಂದೆ ಕ್ಯಾಂಬ್ರಿಯನ್ನಲ್ಲಿರುವ ತಮ್ಮ ಹತ್ತಿರದ ಸಂಬಂಧಿಕರಿಂದ ಬೇರ್ಪಟ್ಟಿವೆ. ಆದುದರಿಂದ ಇವುಗಳಲ್ಲಿ ಇನ್ನೂ ಕೆಲವು ಜೀವಿಗಳು ಮುಂಚಿನ ಮೂಲವನ್ನು ಹೊಂದಿರಬಹುದು ಎನ್ನಲಾಗಿದೆ.
ಟಾರ್ಡಿಗ್ರೇಡ್ಗಳು ಸಂಪೂರ್ಣವಾಗಿ ಬೆಳೆದಾಗ ಸಾಮಾನ್ಯವಾಗಿ ಸುಮಾರು ೦.೫ ಮಿಮೀ (೦.೦೨೦ ಇಂಚು) ಉದ್ದವಾಗಿರುತ್ತವೆ. ಅವುಗಳು ಗಿಡ್ಡ ಮತ್ತು ದಪ್ಪವಾಗಿದ್ದು, ನಾಲ್ಕು ಜೋಡಿ ಕಾಲುಗಳನ್ನು ಹೊಂದಿರುತ್ತವೆ, ಪ್ರತಿಯೊಂದೂ ಉಗುರುಗಳಲ್ಲಿ (ಸಾಮಾನ್ಯವಾಗಿ ನಾಲ್ಕರಿಂದ ಎಂಟು) ಅಥವಾ ಸಕ್ಷನ್ ಡಿಸ್ಕ್ಗಳಾಗಿ ಕೊನೆಗೊಳ್ಳುತ್ತದೆ. ಟಾರ್ಡಿಗ್ರೇಡ್ಗಳು ಪಾಚಿಗಳು ಮತ್ತು ಕಲ್ಲುಹೂವುಗಳಲ್ಲಿ ಕಂಡುಬರುತ್ತವೆ ಮತ್ತು ಸಸ್ಯ ಕೋಶಗಳು, ಪಾಚಿಗಳು ಮತ್ತು ಸಣ್ಣ ಅಕಶೇರುಕಗಳನ್ನು ತಿನ್ನುತ್ತವೆ. ಅವುಗಳನ್ನು ಕಡಿಮೆ-ಶಕ್ತಿಯ ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಬಹುದು. ಇದರಿಂದಾಗಿ ಅವುಗಳನ್ನು ವಿದ್ಯಾರ್ಥಿಗಳು ಮತ್ತು ಹವ್ಯಾಸಿ ವಿಜ್ಞಾನಿಗಳಿಗೆ ಸುಲಭವಾಗಿ ಅಭ್ಯಸಿಸಬಹುದು.[13]