ತಳಿಶಾಸ್ತ್ರ
From Wikipedia, the free encyclopedia
ತಳಿಶಾಸ್ತ್ರ ಜೀವವಿಜ್ಞಾನದ ಪ್ರಮುಖ ಶಾಖೆಗಳಲ್ಲೊಂದು (ಜೆನೆಟಿಕ್). ಅನುವಂಶೀಯತೆ, ವಿಚರಣೆಗಳು, ಜೀವವಿಕಾಸ ಮುಂತಾದ ವಿಷಯಗಳನ್ನು ಅರಿಯಲು ಈ ಶಾಖೆ ಸಹಾಯ ಮಾಡುತ್ತದೆ. ಇದು ಜೀವವಿಜ್ಞಾನದ ಅತ್ಯಂತ ಆಧುನಿಕ ಶಾಖೆ. ಜೀವರಸಾಯನ ಶಾಸ್ತ್ರ, ಬೆಳವಣಿಗೆ, ವಿಭೇದೀಕರಣ ಮುಂತಾದ ವಿಚಾರಗಳೂ ಈ ಶಾಖೆಯ ಪ್ರಕಾರದೊಳಗೆ ಬರುತ್ತವೆ. ಅತ್ಯಂತ ಸೂಕ್ಷ್ಮ ಜೀವಿಗಳಾದ ವೈರಸ್ಗಳಿಂದ ಹಿಡಿದು ಮಾನವನ ವರೆಗಿನ ಜೀವಿಗಳಲ್ಲಿನ ಅನುವಂಶೀಯ ಗುಣಗಳು ಯಾವುವು ಮತ್ತು ಅನುವಂಶೀಯತೆಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಳಿಶಾಸ್ತ್ರ ಚರ್ಚಿಸುತ್ತದೆ. ಪಿತೃಗಳಿಂದ ಪೀಳಿಗೆಗೆ ಅನುವಂಶೀಯ ಗುಣಗಳು ಹೇಗೆ ಸಾಗಿ ಬರುತ್ತವೆ ಎಂಬುದನ್ನು ತಿಳಿಸುವುದೇ ಅಲ್ಲದೆ ಅನುವಂಶೀಯತೆಗೆ ಮೂಲ ಘಟಕಗಳಾದ ಜೀನುಗಳು ಎಂದರೇನು? ಇವುಗಳಲ್ಲಿರುವ ರಾಸಾಯನಿಕ ವಸ್ತುಗಳಾವುವು? ಎಂಬೆಲ್ಲ ವಿಚಾರಗಳನ್ನು ಈ ಶಾಖೆ ಸವಿಸ್ತಾರವಾಗಿ ಚರ್ಚಿಸುತ್ತದೆ.[1]