ಮೆಕ್ಕೆ ಜೋಳ
From Wikipedia, the free encyclopedia
ಮೆಕ್ಕೆ ಜೋಳವು (ಜಿಯಾ ಮೇಸ್; ಇದನ್ನು ಅನೇಕ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ 'ಕಾರ್ನ್' ಎಂದು ಕರೆಯಲಾಗುತ್ತದೆ) ಮೀಸೊಅಮೆರಿಕದಲ್ಲಿ ಇತಿಹಾಸ ಪೂರ್ವ ಕಾಲದಿಂದ ಸ್ಥಳೀಯರು ಒಗ್ಗಿಸಿಕೊಂಡಿರುವ ಒಂದು ಹುಲ್ಲು ಜಾತಿ. ಮುಸುಕಿನ ಜೋಳ, ಗೋವಿನ ಜೋಳ ಪರ್ಯಾಯ ನಾಮಗಳು. ಇದನ್ನು ಆಜ಼್ಟೆಕ್ ಮತ್ತು ಮಾಯನ್ನರು ಕೇಂದ್ರ ಮತ್ತು ದಕ್ಷಿಣ ಮೆಕ್ಸಿಕೊದಾದ್ಯಂತ ನಿಕ್ಸ್ಟಮಲೈಸೇಶನ್ ಎಂದು ಕರೆಯಲ್ಪಡುವ ಕ್ರಿಯೆಯಲ್ಲಿ ಬೇಯಿಸಲು ಅಥವಾ ಪುಡಿಮಾಡಲು ವಿವಿಧ ರೀತಿಗಳಲ್ಲಿ ಬೆಳೆಸಿದರು. ನಂತರ ಈ ಬೆಳೆಯು ಅಮೆರಿಕದ ಹೆಚ್ಚಿನ ಭಾಗದಾದ್ಯಂತ ಹರಡಿತು. ಕ್ರಿ.ಶ 1250ರಿಂದ ಕ್ರಿ.ಶ 1700ರವರೆಗಿನ ಅವಧಿಯಲ್ಲಿ ಹೆಚ್ಚುಕಡಿಮೆ ಸಂಪೂರ್ಣ ಭೂಖಂಡವೇ ಈ ಬೆಳೆಯನ್ನು ಬೆಳೆಯಲು ಆರಂಭಿಸಿತು. ಮೆಕ್ಕೆ ಜೋಳದ ಹೆಚ್ಚುವರಿ ಮತ್ತು ವೈವಿಧ್ಯಗಳ ಆಧಾರದ ಮೇಲೆ ಈ ಪ್ರದೇಶದ ಯಾವುದೋ ಒಂದು ಗಮನಾರ್ಹ ಅಥವಾ ದಟ್ಟ ಸಾಂದ್ರತೆಯ ಜನಸಮೂಹವು ಅತ್ಯುತ್ತಮವಾದ ವ್ಯಾಪಾರ ಜಾಲವೊಂದನ್ನು ಅಭಿವೃದ್ಧಿಗೊಳಿಸಿತು. 15ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 16ನೇ ಶತಮಾನದ ಆರಂಭದಲ್ಲಿ ಅಮೆರಿಕನ್ನರೊಂದಿಗಿನ ಯುರೋಪಿನ ಸಂಪರ್ಕದ ನಂತರ ಪರಿಶೋಧಕರು ಮತ್ತು ವ್ಯಾಪಾರಿಗಳು ಮೆಕ್ಕೆ ಜೋಳವನ್ನು ಯುರೋಪ್ಗೆ ತಂದರು ಹಾಗೂ ವ್ಯಾಪಾರ ಮೂಲಕ ಇತರ ರಾಷ್ಟ್ರಗಳಿಗೆ ಪರಿಚಯಿಸಿದರು. ಮೆಕ್ಕೆ ಜೋಳದ ಭಿನ್ನ ಹವಾಗುಣದಲ್ಲೂ ಬೆಳೆಯುವ ಸಾಮರ್ಥ್ಯದಿಂದಾಗಿ ಮತ್ತು ಉಪಯೋಗವು ತುಂಬಾ ಮೌಲ್ಯಯುತವಾದುದರಿಂದ, ಇದು ಪ್ರಪಂಚದ ಇತರ ಕಡೆಗಳಿಗೂ ಬಹುಬೇಗ ಹರಡಿತು.
ಮೆಕ್ಕೆ ಜೋಳವು ಅಮೆರಿಕಾದಲ್ಲಿ ಅತಿಹೆಚ್ಚು ಬೆಳೆಯುವ ಬೆಳೆಯಾಗಿದೆ. ವಾರ್ಷಿಕವಾಗಿ ಅಮೆರಿಕ ಸಂಯುಕ್ತ ಸಂಸ್ಥಾನವೊಂದರಲ್ಲೇ 332 ದಶಲಕ್ಷ ಮೆಟ್ರಿಕ್ ಟನ್ಗಳಷ್ಟು ಮೆಕ್ಕೆ ಜೋಳವನ್ನು ಬೆಳೆಯಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬೆಳೆಯುವ ಮೆಕ್ಕೆ ಜೋಳದಲ್ಲಿ ಜೀವಾಂತರ ಮೆಕ್ಕೆ ಜೋಳವು 80%ನಷ್ಟನ್ನು ಒಳಗೊಳ್ಳುತ್ತದೆ.[1] ಮೆಕ್ಕೆ ಜೋಳದ ಕೆಲವು ಪ್ರಭೇದಗಳು 7 metres (23 feet)ನಷ್ಟು ಉದ್ದಕ್ಕೆ ಬೆಳೆಯುತ್ತವೆ.[2] ಹೆಚ್ಚು ವಾಣಿಜ್ಯ ದೃಷ್ಟಿಯಿಂದ ಬೆಳೆಸಲ್ಪಡುವ ಮೆಕ್ಕೆ ಜೋಳವು 2.5 metres (8.2 feet) ನಷ್ಟು ಪ್ರಮಾಣಿತ ಎತ್ತರಕ್ಕೆ ಬೆಳೆಯುತ್ತದೆ. ಸಿಹಿ ಮೆಕ್ಕೆಜೋಳವು ಸಾಮಾನ್ಯವಾಗಿ ಜಮೀನಿನಲ್ಲಿ ಬೆಳೆಯುವ ಮೆಕ್ಕೆಜೋಳಗಳಿಗಿಂತ ಚಿಕ್ಕದಾಗಿರುತ್ತವೆ.