ಶಕ್ತಿ
ಬಲವು ನಿರ್ವಹಿಸಬಲ್ಲ ಕಾರ್ಯದ ಯಾವುದೇ ಭೌತಿಕ ಅದಿಶ ಪರಿಮಾಣವನ್ನು ಸೂಚಿಸುವುದು / From Wikipedia, the free encyclopedia
ಶಕ್ತಿ ಎಂದರೆ ಕೆಲಸ (ಅಥವಾ ಕಾರ್ಯ) ಮಾಡಲು ಇರುವ ಅಳವು. ಗ್ರೀಕ್ನ ಮೂಲ ಪದಗಳಾದ ἐνέργεια ಅಂದರೆ ಎನರ್ಜೀಯಾ (ಚಟುವಟಿಕೆ, ಕಾರ್ಯಾಚರಣೆ) ಮತ್ತು ἐνεργός ಎನರ್ಗೊಸ್' (ಸಕ್ರಿಯ, ಕಾರ್ಯನಿರತ) ಎಂಬ ಪದಗಳಿಂದ ಭೌತವಿಜ್ಞಾನದ ಶಕ್ತಿ ('ಎನರ್ಜಿ') ಎಂಬ ಇಂಗ್ಲಿಷ್ ಪದವು ನಿಷ್ಪನ್ನವಾಗಿದೆ. 'ಶಕ್ತಿ' ಎಂಬುದು, ಬಲವು ನಿರ್ವಹಿಸಬಲ್ಲ ಕಾರ್ಯದ ಯಾವುದೇ ಭೌತಿಕ ಅದಿಶ ಪರಿಮಾಣವನ್ನು ಸೂಚಿಸುತ್ತದೆ. ಸಂರಕ್ಷಣಾ ನಿಯಮಕ್ಕೆ ಒಳಗಾಗುವ ವಸ್ತು ಮತ್ತು ವ್ಯವಸ್ಥೆಗಳ ಲಕ್ಷಣವೂ ಆಗಿದೆ. ಚಲನಶಕ್ತಿ, ಅಂತಸ್ಥ ಶಕ್ತಿ, ಶಾಖೋತ್ಪನ್ನ ಶಕ್ತಿ, ಗುರುತ್ವ ಶಕ್ತಿ, ಶಾಬ್ದಿಕ ಶಕ್ತಿ, ಬೆಳಕಿನ ಶಕ್ತಿ, ಸ್ಥಿತಿಸ್ಥಾಪಕ ಶಕ್ತಿ ಮತ್ತು ವಿದ್ಯುತ್ಕಾಂತೀಯ ಶಕ್ತಿ - ಹೀಗೆ ಶಕ್ತಿಯಲ್ಲಿ ಹತ್ತು ಹಲವು ರೂಪಗಳಿವೆ. ಯಾವ ಬಲದ ಆಧಾರದ ಮೇಲೆ ಶಕ್ತಿ ಉತ್ಪನ್ನವಾಗಿದೆ ಎಂಬುದನ್ನು ಆಧರಿಸಿ ಶಕ್ತಿಗೆ ಆ ಬಲದ ಹೆಸರನ್ನು ಗುಣವಾಚಿಯನ್ನಾಗಿ ಸೇರಿಸಲಾಗುತ್ತದೆ.
ಯಾವುದೇ ಶಕ್ತಿಯನ್ನು ರೂಪಾಂತರಿಸಬಹುದು. ಆದರೆ, ಶಕ್ತಿಯ ಒಟ್ಟು ಪ್ರಮಾಣ ಮಾತ್ರ ಅಷ್ಟೇ ಇರುತ್ತದೆ. ಶಕ್ತಿ-ಸಂಪನ್ಮೂಲದ ಸಂರಕ್ಷಣೆ ಎಂಬ ಈ ತತ್ವವನ್ನು 19ನೆಯ ಶತಮಾನದ ಆರಂಭದಲ್ಲಿ ಮೊದಲ ಬಾರಿಗೆ ಹೌದೆಂದು ಸಮರ್ಥಿಸಲಾಯಿತು. ಯಾವುದೇ ವ್ಯವಸ್ಥೆಯಲ್ಲೂ ಇದು ಅನ್ವಯವಾಗುತ್ತದೆ. ನೋಥರ್ ಪ್ರಮೇಯದ ಪ್ರಕಾರ, ಭೌತವಿಜ್ಞಾನದ ನಿಯಮಗಳು ಕಾಲಾಂತರದಲ್ಲಿ ಬದಲಾಗದು ಎಂಬ ಸಂಗತಿಯನ್ನು ಆಧರಿಸಿಯೇ ಶಕ್ತಿಯ ಸಂರಕ್ಷಣೆ ನಡೆದಿದೆ.[1]
ವ್ಯವಸ್ಥೆಯ ಒಟ್ಟು ಶಕ್ತಿಯು ಕಾಲಾಂತರದಲ್ಲಿ ಬದಲಾಗದಿದ್ದರೂ, ಅದನ್ನು ಯಾತಕ್ಕಾಗಿ ಬಳಸಲಾಗುತ್ತದೆ ಎಂಬುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಉದಾಹರಣೆಗೆ, ಚಲಿಸುತ್ತಿರುವ ವಿಮಾನದಲ್ಲಿ ಕುಳಿತಿರುವ ಪ್ರಯಾಣಿಕನೊಬ್ಬನಿಗೆ, ವಿಮಾನಕ್ಕೆ ಹೋಲಿಸಿದಾಗ ಶೂನ್ಯ ಚಲನ ಶಕ್ತಿಯಿರುತ್ತದೆ; ಆದರೆ ಭೂಮಿಗೆ ಹೋಲಿಸಿ ನೋಡಿದಾಗ ಶೂನ್ಯವಲ್ಲದ ಚಲನೆಯ ಶಕ್ತಿಯಿರುತ್ತದೆ.