![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/f2/Sardar_patel_%2528cropped%2529.jpg/640px-Sardar_patel_%2528cropped%2529.jpg&w=640&q=50)
ವಲ್ಲಭ್ಭಾಯಿ ಪಟೇಲ್
ಭಾರತದ ಸ್ವಾತಂತ್ರ್ಯ ಹೋರಾಟಗಾರ, ಭಾರತದ ಏಕೀಕರಣ ಚಳುವಳಿಯ ನೇತಾರ / From Wikipedia, the free encyclopedia
ಸರ್ದಾರ್ ವಲ್ಲಭಭಾಯಿ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲಾಗುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.[1] ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ "ಮುಖ್ಯ"ವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಜಾಮಾನಸದಲ್ಲಿ ದೊರೆತಿತ್ತು.[2]
ವಲ್ಲಭ್ಭಾಯಿ ಪಟೇಲ್ | |
---|---|
![]() | |
ಭಾರತದ ಉಪ ಪ್ರಧಾನ ಮಂತ್ರಿ | |
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೭ – ೧೫ ಡಿಸೆಂಬರ್ ೧೯೫೦ | |
ಪ್ರಧಾನ ಮಂತ್ರಿ | ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಹೊಸ ಪದವಿ |
ಉತ್ತರಾಧಿಕಾರಿ | ಮೊರಾರ್ಜಿ ದೇಸಾಯಿ |
ಗೃಹ ಮಂತ್ರಿ | |
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೮ – ೧೫ ಡಿಸೆಂಬರ್ ೧೯೫೦ | |
ಪ್ರಧಾನ ಮಂತ್ರಿ | ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಹೊಸ ಪದವಿ |
ಉತ್ತರಾಧಿಕಾರಿ | ಸಿ. ರಾಜಗೋಪಾಲಚಾರಿ |
ವೈಯಕ್ತಿಕ ಮಾಹಿತಿ | |
ಜನನ | ವಲ್ಲಭಭಾಯ್ ಝವೇರಿಭಾಯ್ ಪಟೇಲ್ (೧೮೭೫-೧೦-೩೧)೩೧ ಅಕ್ಟೋಬರ್ ೧೮೭೫ ನಾಡಿಯಾದ್, ಗುಜರಾತ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ |
ಮರಣ | Error: Need valid birth date (second date): year, month, day ಬಾಂಬೆ, ಬಾಂಬೆ ರಾಜ್ಯ, ಭಾರತ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಮಕ್ಕಳು | ಮಣೀಬೇನ್ ಪಟೇಲ್, ದಹ್ಯಭಾಯ್ ಪಟೇಲ್ |
ಅಭ್ಯಸಿಸಿದ ವಿದ್ಯಾಪೀಠ | ಇನ್ಸ್ ಆಫ್ ಕೋರ್ಟ್ |
ಉದ್ಯೋಗ | ವಕೀಲ ರಾಜಕೀಯ ಕಾರ್ಯಕರ್ತ |
ಧರ್ಮ | ಹಿಂದೂ ಧರ್ಮ |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತ ರತ್ನ |
![Thumb image](http://upload.wikimedia.org/wikipedia/kn/a/ac/Sardarpatel.jpg)
![Thumb image](http://upload.wikimedia.org/wikipedia/commons/thumb/d/dd/Hyderabad_state_1909.jpg/640px-Hyderabad_state_1909.jpg)
![Thumb image](http://upload.wikimedia.org/wikipedia/commons/thumb/5/5e/Gandhi%2C_Patel_and_Maulana_Azad_Sept_1940.jpg/220px-Gandhi%2C_Patel_and_Maulana_Azad_Sept_1940.jpg)
![Thumb image](http://upload.wikimedia.org/wikipedia/commons/thumb/f/f5/A021_%28Small%29.jpg/320px-A021_%28Small%29.jpg)
ಗುಜರಾತ್ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು.[3] ಅವರು ತರುವಾಯ ಗುಜರಾತ್ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.
ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಪಟೇಲ್ ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ "ಹಂಚಿಕೆಯಾದ" ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು.
ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು "ಭಾರತದ ನಾಗರಿಕ ಸೇವಕರ ಪೋಷಕ ಸಂತ" (patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು "ಭಾರತದ ಏಕೀಕರಣ ನೇತಾರ" ಎಂದೂ ಕರೆಯಲಾಗುತ್ತದೆ. [4] ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ. [5]