ಎರಡನೆಯ ಪಾಣಿಪತ್ ಯುದ್ಧ ೧೫೫೬ರ ನವೆಂಬರ್‍ ೫ರಂದು ಸಾಮ್ರಾಟ್ ಹೇಮಚಂದ್ರ ವಿಕ್ರಮಾದಿತ್ಯ ( "ಹೇಮು") ಮತ್ತು ಅಕ್ಬರನ ಸೈನ್ಯಗಳ ನಡುವೆ ನಡೆಯಿತು.

ಹಿನ್ನೆಲೆ

Thumb
ಸಾಮ್ರಾಟ್ ಹೇಮಚಂದ್ರ ವಿಕ್ರಮಾದಿತ್ಯ - ದೆಹಲಿಯ ಹಿಂದೂ ರಾಜ (1556)

ಮುಘಲ್ ರಾಜ ಹುಮಾಯೂನನು ಪುಸ್ತಕ ಭಂಡಾರದ ಮೆಟ್ಟಿಲಮೇಲಿಂದ ಇಳಿದು ಬರುವಾಗ ಜಾರಿ ಬಿದ್ದು , ಮರಣ ಹೊಂದಿದನು. ಅಂದು ತಾರೀಖು ೧೫೫೬ರ ಜನವರಿ ೨೪. ಅವನ ನಂತರ ಅವನ ಮಗ , ಹದಿಮೂರು ವರ್ಷದ ಬಾಲಕ ಅಕ್ಬರ್‍ ಪಟ್ಟವೇರಿದನು. ಈ ಕಾಲದಲ್ಲಿ ಮುಘಲ್ ಸಾಮ್ರಾಜ್ಯವು ಕಾಬೂಲು, ಕಾಂದಹಾರ್‍ ಪ್ರದೇಶಗಳು, ಹಾಗೂ ದೆಹಲಿ ಮತ್ತು ಪಂಜಾಬಿನ ಕೆಲ ಭಾಗಗಳಿಗೆ ಸೀಮಿತವಾಗಿತ್ತು. ಹುಮಾಯೂನನ ಮರಣದ ವೇಳೆಗೆ ಅಕ್ಬರ್‍ ಪಂಜಾಬಿನ ಮೇಲಿ ದಂಡೆತ್ತಿ ಹೋಗಿದ್ದ. ಅವನೊಂದಿಗೆ ಅವನ ರಕ್ಷಕ ಬಂಟ ಬೈರಾಮ ಖಾನನೂ ಇದ್ದನು. ೧೫೫೬ರ ಫೆಬ್ರುವರಿಯಂದು , ಪಂಜಾಬಿನ ಕಲಾನೌರ್‍ ಎಂಬಲ್ಲಿಯ ತೋಟವೊಂದರಲ್ಲಿ ಅಕ್ಬರನ ಪಟ್ಟಾಭಿಷೇಕವಾಯಿತು. ಚುನಾರ್‍ ಪ್ರದೇಶದ ಅಫ್ಘನಿ ರಾಜ ಆದಿಲ್ ಷಹಾ ಸೂರಿಯ ಪ್ರಧಾನ ಮಂತ್ರಿಯಾಗಿದ್ದ ಹೇಮುವು ಮುಘಲರನ್ನು ಭಾರತದಿಂದ ಓಡಿಸಬೇಕೆಂದು ಕಾಯುತ್ತಿದ್ದ. ಹುಮಾಯೂನನ ಮರಣದ ವೇಳೆ ಬಂಗಾಳದಲ್ಲಿದ್ದ ಹೇಮು ಅದರ ಲಾಭ ಪಡೆದುಕೊಂಡು ಮುಘಹಲ್ ಸಾಮ್ರಾಜ್ಯವನ್ನು ಹೆಸರಿಲ್ಲದಂತೆ ಮಾಡುವ ತನ್ನ ಆಸೆಯನ್ನು ತನ್ನ ಅಫಘನಿ ಮತ್ತು ರಜಪೂತ ಸೈನ್ಯಾಧಿಕಾರಿಗಳಿಗೆ ಪ್ರಕಟಪಡಿಸಿ, ನೆಪೋಲಿಯನ್ ಹೊರಟಂತೆ ದಂಡಯಾತ್ರೆ ಹೊರಟನು. ದಾರಿಯುದ್ದಕ್ಕೂ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಇವುಗಳನ್ನು ಗೆದ್ದು ಆಗ್ರಾಕ್ಕೆ ಲಗ್ಗೆ ಹಾಕಿದನು. ಮುಘಲ್ ಸೈನ್ಯದ ಸೇನಾಪತಿ ಯುದ್ಧರಂಗದಿಂದ ಓಡಿಹೋದನು. ಆಗ್ರಾ ನಗರವು ಪ್ರತಿಭಟನೆಯಿಲ್ಲದೆ ಹೇಮುವಿನ ವಶವಾಯಿತು. ಇಟಾವಾ, ಆಗ್ರಾ ಮತ್ತು ಕಲ್ಪಿ ಪ್ರದೇಶಗಳನ್ನೊಳಗೊಂಡ ದೊಡ್ಡ ಪ್ರದೇಶ ಹೇಮುವಿನ ಸುಪರ್ದಿಗೆ ಬಂದಿತು. ಅಲ್ಲಿಂದ ದೆಹಲಿಯತ್ತ ತನ್ನ ಸೈನ್ಯವನ್ನು ಚಲಾಯಿಸಿದ ಹೇಮುವು ತುಘಲಕಾಬಾದಿನ ಹೊರಗೆ ಬೀಡುಬಿಟ್ಟನು. ೧೫೫೬ರ ಅಕ್ಟೋಬರ್‍ ೬ರಂದು ಹೇಮುವ ಸೈನ್ಯಕ್ಕೆ ಮುಘಲ್ ಸೈನ್ಯ ಎದುರಾಯಿತು. ತೀವ್ರ ಕದನದ ನಂತರ ಅಕ್ಬರನ ಸೈನ್ಯವನ್ನು ಹಿಮ್ಮೆಟ್ಟಿಸಲಾಯಿತು.ತಾರ್ಡಿ ಬೇಗ್ ಎಂಬ ಮುಘಲ್ ಸೇನಾಧಿಕಾರಿ ಪಲಾಯನಗೈದಿದ್ದರಿಂದ ಹೇಮುವು ವಿಶೇಷ ಪ್ರಯತ್ನವಿಲ್ಲದೆ ದೆಹಲಿ ತಲುಪಲು ಅನುವಾಯಿತು. ಈ ಯುದ್ಧದಲ್ಲಿ ಸುಮಾರು ೩೦೦೦ ಸೈನಿಕರು ಮಡಿದರು.

ಯುದ್ಧ

ದೆಹಲಿ ಮತ್ತು ಆಗ್ರಾದಲ್ಲಿನ ಬೆಳವಣಿಗೆಗಳಿಂದ ಕಲಾನೌರಿನ ಮುಘಲರು ಪ್ರಕ್ಷುಬ್ದರಾದರು. ಅನೇಕ ಸೇನಾಧಿಕಾರಿಗಳು ಅಕ್ಬರ್‍ ಮತ್ತು ಬೈರಾಮ ಖಾನರಿಗೆ ಹೇಮುವಿನ ಸೇನೆಯನ್ನು ಎದುರಿಸುವ ಶಕ್ತಿ ಮುಘಲ್ ಸೇನೆಗೆ ಇಲ್ಲವಾದ್ದರಿಂದ ಕಾಬೂಲಿಗೆ ಮರಳಿಹೋಗುವಂತೆ ಸಲಹೆಯಿತ್ತರೂ, ಬೈರಾಮಖಾನ ಯುದ್ಧವನ್ನೇ ಆಯ್ದುಕೊಂಡ. ಅಕ್ಬರನ ಸೇನೆ ದೆಹಲಿಯತ್ತ ನಡೆಯಿತು. ನವೆಂಬರ್‍ ೫ರಂದು ಎರಡೂ ಸೇನೆಗಳು ಐತಿಹಾಸಿಕ ಪಾಣಿಪತ್ತಿನಲ್ಲಿ ಎದುರಾದವು. ಇದೇ ಪಾಣಿಪತ್ತಿನಲ್ಲಿ ಮೂವತ್ತು ವರ್ಷಗಳ ಕೆಳಗೆ ಇಬ್ರಾಹಿಮ್ ಲೋಧಿಯನ್ನು ಸೋಲಿಸಿ ಬಾಬರನು ಮುಘಲ್ ವಂಶದ ಅಡಿಪಾಯ ಹಾಕಿದ್ದ. ( ಇದು ಒಂದನೆಯ ಪಾಣಿಪತ್ ಯುದ್ಧ ಎಂದು ಇಂದಿಗೂ ಕರೆಯಲ್ಪಡುತ್ತದೆ). ಹೇಮುವಿನ ಸೈನ್ಯ ಮೊದಮೊದಲು ಜಯಭೇರಿ ಬಾರಿಸಿದರೂ, ಹೇಮುವಿನ ಕಣ್ಣಿಗೆ ಎದುರಾಳಿಗಳ ಬಿಲ್ಲುಗಾರನೊಬ್ಬ ಬಾಣ ನಾಟಿದ್ದರಿಂದ ಯುದ್ಧದ ದಿಕ್ಕೇ ಬದಲಾಯಿತು. ಹೇಮುವಿನ ಗಾಯದಿಂದ ಎದೆಗುಂದಿನ ಅವನ ಸೈನಿಕರು ಸೋಲಪ್ಪಿದರು.ಹೇಮುವನ್ನು ಸೆರೆಹಿಡಿದು ಯುದ್ಧರಂಗದಿಂದ ೫ ಕೋಶ ದೂರದಲ್ಲಿದ್ದ ಅಕ್ಬರ್‍ ಮತ್ತು ಬೈರಾಮ ಖಾನರಲ್ಲಿಗೆ ತರಲಾಯಿತು. ಈ ಯುದ್ಧದಿಂದ ಮುಘಲ್ ಸಾಮ್ರಾಜ್ಯ ಭಾರತದಲ್ಲಿ ಮತ್ತೆ ಪ್ರತಿಷ್ಟಾಪಿತವಾಯಿತು.

ಇವನ್ನೂ ನೋಡಿ

ಒಂದನೆಯ ಪಾಣಿಪತ್ ಯುದ್ಧ ೧೫೨೬

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.