ಟ್ರಾಯ್
From Wikipedia, the free encyclopedia
ಟ್ರಾಯ್ ಏಷ್ಯ ಮೈನರಿನ ವಾಯುವ್ಯದಲ್ಲಿ, ಡಾರ್ಡೆನಲ್ಸ್ಗೆ ದಕ್ಷಿಣದಲ್ಲಿ, ಟ್ರೋವಾಸ್ ಅಥವಾ ಟ್ರೋವಾಡ್ ಪ್ರದೇಶದಲ್ಲಿದ್ದ ಪ್ರಾಚೀನ ನಗರ. ಈ ಪುರಾತನ ನಗರದ ನೆಲೆ ಈಗಿನ ತುರ್ಕಿಯ ವಾಯುವ್ಯದಲ್ಲಿ ಮೆಂಡರೆಸ್ ನದಿಯ ದಡದಲ್ಲಿರುವ ಹಿಸರ್ಲಿಕ್ನಲ್ಲಿದೆ. ಶಿಲಾಯುಗದಿಂದ ರೋಮನ್ ಕಾಲದ ವರೆಗೆ ಅನುಕ್ರಮವಾಗಿ ಈ ನಿವೇಶನದಲ್ಲಿ ಒಂಬತ್ತು ನಗರಗಳು ನಿರ್ಮಿತವಾದುವೆಂದೂ. ಪ್ರತಿಯೊಂದು ಸಾರಿಯೂ ಹಿಂದಿನ ನಗರದ ಪಾಳಿನ ಮೇಲೆ ಹೊಸ ನಗರ ನಿರ್ಮಿತವಾಗುತ್ತಿತ್ತೆಂದೂ ಹೇಳಲಾಗಿದೆ. ಹೋಮರ್ ಕವಿ ರಚಿಸಿದ್ದೆನ್ನಲಾದ ಇಲಿಯಡ್ ಮತ್ತು ಆಡಿಸ್ಸಿ ಮಹಾಕಾವ್ಯಗಳಲ್ಲೂ ವರ್ಜಿಲನ ಇನೀಯಿಡ್ನಲ್ಲೂ ಇದು ಅಮರವಾಗಿದೆ. ಹತ್ತು ವರ್ಷಗಳ ಟ್ರೋಜನ್ ಯುದ್ಧದಲ್ಲಿ ಸಂಘಟಿತ ಗ್ರೀಕ್ ಸೇನೆಗಳು ಟ್ರಾಯ್ ನಗರಕ್ಕೆ ಮುತ್ತಿಗೆ ಹಾಕಿ ಇದನ್ನು ವಶಪಡಿಸಿಕೊಂಡು ನಾಶಪಡಿಸಿದುವೆಂದು ಗ್ರೀಕ್ ಆಖ್ಯಾಯಿಕೆಯಿದೆ. ಮಧ್ಯಯುಗದ ರಮ್ಯ ಕಾವ್ಯಗಳಲ್ಲೂ ಇದರ ಉಲ್ಲೇಖವುಂಟು. ಇಲೀಯಮ್, ಟ್ರಾಯ್, ಟ್ರೋಯ, ಟ್ರೋಜ, ಇಲೀಯನ್ ಎಂಬವೂ ಇದರ ಹೆಸರುಗಳು. ನಾಲ್ಕು ತಲೆಮಾರುಗಳ ಅನಂತರ ಈ ನಗರದ ದುರ್ಗಮವಾದ ಕೋಟೆಯ ಗೋಡೆಗಳನ್ನು ಅಪಾಲೋ ಮತ್ತು ಪೊಸೈಡಾನರು ನಿರ್ಮಿಸಿದರು. ಅನಂತರದ ಹಾಗೂ ಕೊನೆಯ ದೊರೆ ಪ್ರೈಯಮ್.[1] ಅವನ ಮಗ ಪ್ಯಾರಿಸ್. ಟ್ರೋಜನ್ ಯುದ್ಧಕ್ಕೆ ಇದು ಕಿಡಿ ಹಚ್ಚಿತು. ಟ್ರಾಯ್ ನಾಶವಾಯಿತು. ಕ್ರಿ. ಪೂ. 1184ರಲ್ಲಿ ಈ ಘಟನೆ ಸಂಭವಿಸಿತೆಂಬುದು ಐತಿಹ್ಯ.