ನ್ಯೂಕ್ಲೀಯ ಶಕ್ತಿ
From Wikipedia, the free encyclopedia
ಬೈಜಿಕ ಕ್ರಿಯೆಗಳಿಂದ ಬಿಡುಗಡೆಯಾದ ಶಕ್ತಿಯೇ ಬೈಜಿಕ ಅಥವಾ ನ್ಯೂಕ್ಲೀಯ ಶಕ್ತಿಯಾಗಿದೆ. ನಮ್ಮ ಈ ಆಧುನಿಕ ಯುಗದಲ್ಲಿ ನ್ಯೂಕ್ಲೀಯ ಶಕ್ತಿಯ ಬಳಕೆಯು ಪರ್ಯಾಯ ಶಕ್ತಿಯ ಮೂಲವಾಗಿ ಭರವಸೆ ಹುಟ್ಟಿಸಿದೆ. ನ್ಯೂಕ್ಲೀಯ ಕ್ರಿಯೆಗಳ ಪ್ರಮುಖ ಅನುಕೂಲವೆಂದರೆ ವಿಕಿರಣಪಟು ಮತ್ತು ವಿಕಿರಣಪಟುವಲ್ಲದ ಐಸೋಟೋಪುಗಳನ್ನು ತಯಾರಿಸುವುದು ನ್ಯೂಕ್ಲೀಯ ಕ್ರಿಯೆ ನಡೆಸಿ, ವಿಕಿರಣಪಟುವಾಗಿರುವ ಐಸೋಟೋಪುಗಳನ್ನು ಪಡೆಯುವ ಪ್ರಕ್ರಿಯೆಗೆ ಕೃತಕ ವಿಕಿರಣಪಟುಗಳೆಂದು ಹೆಸರು. ನ್ಯೂಕ್ಲೀಯ ಕ್ರಿಯೆಯು ಆಕಸ್ಮಿಕ ಸಂಭವನೀಯ ಕ್ರಿಯೆಯಾಗಿರುವುದರಿಂದ, ಬಿಡುಗಡೆಯಾಗುವ ಉತ್ಪನ್ನಗಳು ಅತ್ಯಲ್ಪ. ನ್ಯೂಕ್ಲೀಯ ಕ್ರಿಯೆಯ ಅತೀ ದೊಡ್ಡ ಸವಾಲು ಎಂದರೆ ಅದರ ನಿರಂತರತೆಯನ್ನು ಕಾಯ್ದುಕೊಳ್ಳುವುದು. ಈ ಕ್ರಿಯೆಗಳು ಆಕಸ್ಮಿಕವಾಗಿ ನಡೆಯುವುದರಿಂದ ಅವು ನಿರಂತರವಾಗಿ ನಡೆಯವು. ಆದ್ದರಿಂದ ನ್ಯೂಕ್ಲೀಯ ಕ್ರಿಯೆಗಳು ಸೈದ್ಧಾಂತಿಕವಾಗಿ ಪ್ರಮುಖವಾಗಿಯೇ ಹೊರತು ವ್ಯಾವಹಾರಿಕವಾಗಿ ಸಾಧುವಲ್ಲ ಎಂದು ಭಾವಿಸಲಾಯಿತು. ಆದರೆ ಈ ಆಲೋಚನೆಗೆ ಇದ್ದಕ್ಕಿದ್ದಂತೆ ಹೊಸದೊಂದು ತಿರುವು ದೊರೆಯಿತು. ನ್ಯೂಕ್ಲೀಯವಿದಳನ ಕ್ರಿಯೆಯು ಸರಪಳಿ ಕ್ರಿಯೆಯಾಗಿದ್ದು, ಅದನ್ನು ನಿರಂತರವಾಗಿ ನಡೆಸಬಹುದೆಂಬ ಅಂಶ ತಿಳಿಯಿತು. ನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳನ್ನು ನಿರಂತರವಾಗಿ ನಡೆಸುವ ಆಲೋಚನೆ ಮೂಡಿತು. ಹೀಗೆ ನ್ಯೂಕ್ಲೀಯ ಕ್ರಿಯೆಗಳಿಂದ ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆಂದು ತಿಳಿದು ಬಂತು.[1]