ಸ್ಯಾಮ್ಯುಯೆಲ್ ಕ್ರಾಂಪ್ಟನ್
From Wikipedia, the free encyclopedia
ಸ್ಯಾಮ್ಯುಯೆಲ್ ಕ್ರಾಂಪ್ಟನ್,[1] [೩ ಡಿಸೆಂಬರ್ ೧೭೫೩-೨೬ ಜೂನ್, ೧೮೨೭) ಬ್ರಿಟನ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹತ್ತಿ ನೂಲುವ ಪ್ರಕ್ರಿಯೆಯಲ್ಲಿ ಬಳಕೆಗೆಬಂದ ಎರಡು ಪ್ರಮುಖ ಯಂತ್ರಗಳ ಗುಣಾವಗುಣಗಳನ್ನು ಬಳಸಿಕೊಂಡು ಮತ್ತೊಂದು ಹೊಸ ಯಂತ್ರವನ್ನು ನಿರ್ಮಿಸಿ, ಅಮರರಾದ ವ್ಯಕ್ತಿಯೆಂದು 'ಬ್ರಿಟನ್ನಿನ ಯಂತ್ರೋದ್ಯಮ ಚರಿತ್ರೆ'ಯಲ್ಲಿ ದಾಖಲಿಸಲ್ಪಟ್ಟಿದ್ದಾರೆ. ಅವರು 'ಮ್ಯೂಲ್' ಎಂಬ ತಮ್ಮ ಆಧುನಿಕ ಯಂತ್ರದ ಮೂಲಕ, ಅತ್ಯಂತ ಸೂಕ್ತವಾದ ಹತ್ತಿ ದಾರ ತಯಾರಿಸುವ ದಿಶೆಯಲ್ಲಿ 'ಮೇರುವ್ಯಕ್ತಿ', ಹಾಗೂ 'ಪ್ರವರ್ತಕ'ನೆಂಬ ಹೆಗ್ಗಳಿಕೆಗೆ ಪಾತ್ರನಾದವರು. ಆತ ಒಬ್ಬ ಸಮರ್ಥ, ವಿಜ್ಞಾನಿ, ತಂತ್ರಜ್ಞ, ಹತ್ತಿದಾರ ನೂಲುವ ಯಂತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ವಿಶ್ವದಾದ್ಯಂತ ಹೆಸರಾಗಿದ್ದರು. ಅವರು ತಮ್ಮ ವೃತ್ತಿಯಲ್ಲಿ ಹಿರಿಯರಾಗಿದ್ದ, ಜೇಮ್ಸ್ ಹಾರ್ಗ್ರಿವ್ಸ್ ಮತ್ತು ರಿಚರ್ಡ್ ಆರ್ಕ್ ರೈಟ್ ನಿರ್ಮಿಸಿದ ಹತ್ತಿ ದಾರ ನಿರ್ಮಾಣ ಯಂತ್ರಗಳನ್ನು ಬಹಳ ಹತ್ತಿರದಿಂದ ಅಭ್ಯಾಸಮಾಡಿ ಮ್ಯೂಲ್ ಎಂಬ ಯಂತ್ರವನ್ನು ಸಂರಚಿಸಿದರು. ಈ ಯಂತ್ರ ಜೇಮ್ಸ್ ಹಾರ್ಗ್ರಿವ್ಸ್ ಮತ್ತು ಸರ್ ರಿಚರ್ಡ್ ಆರ್ಕ್ರೈಟ್,ರ ತರಹವೇ ಕಾರ್ಯನಿರ್ವಹಿಸಿದರೂ, ಇನ್ನೂ ಮುಂದೆ ಸಾಗಿ ಉತ್ಪಾದನೆಯಲ್ಲಿ ಒಂದು ಕ್ರಾಂತಿಯನ್ನೇ ನಿರ್ಮಿಸಿತು. ಬ್ರಿಟನ್ ನಲ್ಲಿ ಶುರುವಾದ 'ಕೈಗಾರಿಕಾ ಕ್ರಾಂತಿ',[2] ವಿಶ್ವದ ದಿನಬಳಕೆಯ ವಸ್ತುಗಳ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲು ಸಹಾಯವಾಯಿತು. ಈ ಯಂತ್ರದ ಬಲದಿಂದ ಬ್ರಿಟನ್ ರಾಷ್ಟ್ರ ನೂರುವರ್ಷಕ್ಕೂ ಮೇಲ್ಪಟ್ಟು ಹತ್ತಿ ಬಟ್ಟೆ ನಿರ್ಮಾಣದಲ್ಲಿ ವಿಕ್ರಮವನ್ನು ಸಾಧಿಸಿತು. ಬ್ರಿಟನ್ನಿನ ಅಧೀನದಲ್ಲಿದ್ದ ವಿಶ್ವದ ರಾಷ್ಟ್ರಗಳಿಗೆಲ್ಲಾ ಯಂತ್ರೋಪಕರಣಗಳು, ಮಾನವ ಸಂಸಾಧನಗಳು, ಮತ್ತು ಪ್ರಾವೀಣ್ಯತೆಗಳ ನೆರವನ್ನು ಕೊಡುವಲ್ಲಿ ನೂರು ವರ್ಷಕ್ಕೂ ಮೇಲ್ಪಟ್ಟು ಮುಂಚೂಣಿಯಲ್ಲಿತ್ತು.