ನವಣೆ
From Wikipedia, the free encyclopedia
Remove ads
'ನವಣೆ' [೨] ಒಂದು ಸತ್ವಯುತ ಕಿರುಧಾನ್ಯ. ಇದು ಅಲ್ಪಾವಧಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯ. 'ಉತ್ತಮ ಪೌಷ್ಟಿಕ ಮೌಲ್ಯ'ವನ್ನು ಹೊಂದಿದ್ದರೂ ಈ ಧಾನ್ಯದ ಬಳಕೆ ಕಡಿಮೆ. 'ಕಿರುಧಾನ್ಯ'ಗಳಿಗೆ ಉತ್ತಮ ಮಾರುಕಟ್ಟೆ ಮತ್ತು 'ಬೆಂಬಲಬೆಲೆ', ಇಲ್ಲದಿರುವುದು ಮತ್ತು 'ಬಡವರ ಆಹಾರ,' ಎಂಬ ಭಾವನೆ ಇರುವುದರಿಂದ ಕ್ರಮೇಣವಾಗಿ ನವಣೆಯಂತಹ ಕಿರುಧಾನ್ಯಗಳು ಅವಸಾನದ ಅಂಚನ್ನು ಮುಟ್ಟುತ್ತಿವೆ. ನವಣೆ ಕೀಟ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ಕಡಿಮೆ ಫಲವತ್ತಾದ ಹೊಲಗಳಲ್ಲೂ ಸುಲಭವಾಗಿ ಬೆಳೆಯಬಹುದು.
ನವಣೆ ಕಿರುಧಾನ್ಯ ಯಾದಿಯಲ್ಲಿರುವ ಸಜ್ಜೆಯ ನಂತರದ ಪ್ರಮುಖ ಕಿರುಧಾನ್ಯ. ಕಿರುಧಾನ್ಯ. ಒರಟು ಧಾನ್ಯ ಹೀಗೆ ಬೇರೆ ಬೇರೆ ಗುಂಪುಗಳನ್ನು ಮಾಡಿ ಭಿನ್ನಭಿನ್ನವಾಗಿ ವ್ಯವಹರಿಸುತ್ತಿರುವಾಗಲೂ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ ತನ್ನದೇ ನಿಶ್ಚಿತ ವ್ಯಾಖ್ಯಾನವನ್ನು ಬಳಸುತ್ತದೆ. ಇದರ ಪ್ರಕಾರ ಊದಲು (ಬಾರ್ನ್‌ಯಾರ್ಡ್ ಮಿಲ್ಲೆಟ್), ರಾಗಿ, ಟೆಫ್[೩], ಬರಗು (ಕಾಮನ್ ಮಿಲ್ಲೆಟ್), ಹಾರಕ (ಕೋಡೋ ಮಿಲ್ಲೆಟ್), ಸಜ್ಜೆ ಮತ್ತು ನವಣೆಗಳು ಕಿರುಧಾನ್ಯಗಳು.[೪] ಕೆಲವೊಮ್ಮೆ ರಾಗಿ ಹಾಗೂ ಸಜ್ಜೆಗಳ ವಿವರಗಳು ಬಿಡಿಯಾಗಿ ದೊರೆಯುತ್ತವೆಯಾದರೂ ನವಣೆ ಮತ್ತು ಇತರ ಧಾನ್ಯಗಳಲ್ಲಿ ಇದು ಇಲ್ಲವೇ ಇಲ್ಲವೆನ್ನಿಸುವಷ್ಟು ಕಡಿಮೆ. ೧೯೯೦ರದ ದಶಕದ ಬಗೆಗಿನ ಒಂದು ಅಂದಾಜಿನ ಪ್ರಕಾರ ನವಣೆಯ ಜಾಗತಿಕ ಧಾನ್ಯದ ಉತ್ಪಾದನೆ ಸುಮಾರು ೫ ದಶಲಕ್ಷ ಟನ್ನು[೫]
Remove ads
ಇತಿಹಾಸ
ನವಣೆಯನ್ನು ಏಷಿಯಾದ ಸಮಶೀತೋಷ್ಣ ಪ್ರದೇಶದಲ್ಲಿ ವನ್ಯಸಸ್ಯ ಸೆ. ವಿರಿಡಿಸ್‌ನಿಂದ ಸುಮಾರು ೭,೦೦೦ ವರುಷಗಳ ಹಿಂದೆ ಪಳಗಿಸಲಾಯಿತು. ಚೀನಾದ ದಕ್ಷಿಣದಲ್ಲಿ ಭತ್ತ ಪ್ರಮುಖವಾದರೆ ನವಣೆಯು ಚೀನಾದ ಉತ್ತರದಲ್ಲಿ ನವಶಿಲಾಯುಗದಲ್ಲಿ ಪ್ರಮುಖ ಬೆಳೆಯಾಯಿತು. ಅನುವಂಶಿಕ ಮಾಹಿತಿಯು ನವಣೆಯನ್ನು ಕೇಂದ್ರ ಏಷಿಯಾ ಹಾಗೂ ಚೀನಾದಲ್ಲಿ ಸ್ವತಂತ್ರವಾಗಿ ಬೆಳೆಸಲಾಯಿತು ಎಂದು ಸೂಚಿಸುತ್ತದೆ. ಇದು ಗುಜರಾತಿನ ಕಚ್ ಜಿಲ್ಲೆಯ ಶಿಕಾರಿಪುರದ ಹರಪ್ಪ ಹಂತದಲ್ಲಿ (ಕ್ರಿ ಪೂ ೨೫೦೦-೨೨೦೦) ಪತ್ತೆಯಾಗಿದೆ. ಅಲ್ಲದೆ ದೈಮಾಬಾದ್‌ನ (ಮಹಾರಾಷ್ಟ್ರ) ಜೊರ್ವೆ ಹಂತದಲ್ಲಿ (ಕ್ರಿ ಪೂ ೧೪೦೦-೧೯೦೦) ಪತ್ತೆಯಾಗಿದೆ. [೬][೭]
Remove ads
ಸಾಗುವಳಿ
ಇದು ಸಮಶೀತೋಷ್ಣ ವಲಯದಿಂದ ಉಷ್ಣವಲಯಗಳ ವರೆಗೆ ಬೆಳೆಯುತ್ತದೆ. ೨೦೦-೪೦೦ಮಿಲ್ಲಿಮೀಟರ್‌ಗಳಷ್ಟು ಕಡಿಮೆ ಮಳೆಯಲ್ಲಿಯೂ ಬೆಳಯಬಲ್ಲದು. ಚೀನಾ, ಭಾರತ, ನೇಪಾಳ, ಜಪಾನ್, ಯುರೇಸಿಯ, ಇಥಿಯೋಪಿಯ, ಜಿಂಬಾಬ್ವೆ ದೇಶಗಳಲ್ಲಿ ಬೆಳೆಯಲಾಗುತ್ತದೆ. ಭಾರತದಲ್ಲಿ ನವಣೆ ಬೆಳೆಯುವ ಪ್ರಮುಖ ರಾಜ್ಯಗಳು ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳು ನಾಡು.[೮] ಕರ್ನಾಟಕದಲ್ಲಿ ರಾಯಚೂರು, ಮಾನ್ವಿ, ದೇವದುರ್ಗ ಮತ್ತು ಸೇಡಂ ತಾಲುಕುಗಳಲ್ಲಿ ಬೆಳೆಯಲಾಗುತ್ತದೆ.[೯] ಬೆಳೆಯ ಕಾಲಾವಧಿಯಲ್ಲಿ ೬೦-೧೨೦ ದಿನಗಳವರೆಗೆ ವ್ಯತ್ಯಾಸವಾಗಬಹುದು.[೧೦] ನವಣೆಯ ಸುಧಾರಿತ ತಳಿಗಳ ಇಳುವರಿಯ ಸಾಮರ್ಥ್ಯ ಪೂರ್ಣ ಬಳಕೆಯಾಗಿಲ್ಲ. ಉದಾಹರಣೆಗೆ ಆಂಧ್ರಪ್ರದೇಶದ ಹೆಚ್‌ಎಂಟಿ-೧೦೦-೧ ತಳಿಯ ಇಳುವರಿಯ ಸಾಮರ್ಥ್ಯ ಹೆಕ್ಟೇರಿಗೆ ೨೦೦೦-೨೫೦೦ ಕಿಲೊಗ್ರಾಂಗಳಿದ್ದರೆ ಗರಿಷ್ಟ ರಾಜ್ಯದ ಸರಾಸರಿ ಇಳುವರಿಯು ಕೇವಲ ೬೯೧ ಕಿಲೊಗಳು ಮಾತ್ರವಿತ್ತು.[೮]
- ಬಿತ್ತನೆ: ಬಿತ್ತನೆಯನ್ನು ಕರ್ನಾಟಕದಲ್ಲಿ ಜೂಲೈ-ಆಗಸ್ಟ್ ತಿಂಗಳುಗಳಲ್ಲಿ, ಆಂಧ್ರಪ್ರದೇಶ ಮತ್ತು ತಮಿಳು ನಾಡಿನಲ್ಲಿ ಜೂಲೈ, ಮಹಾರಾಷ್ಟ್ರದಲ್ಲಿ ಜೂಲೈ ೨-೩ನೇ ವಾರದಲ್ಲಿ ಮಾಡಬಹುದು. ಬಿತ್ತನೆಯ ಬೀಜ ಹೆಕ್ಟೇರಿಗೆ ೮ ಕಿಲೊ. ಸಾಲು ಸಾಲುಗಳ ನಡುವಿನ ಅಂತರ ೨೫-೩೦ ಸೆಂಮೀ ಮತ್ತು ಗಿಡ ಗಿಡಗಳ ನಡುವಿನ ಅಂತರ ೮-೧೦ ಸೆಂಮೀ. ಹೆಕ್ಟೇರಿಗೆ ಉತ್ತಮ ಸಸ್ಯ ಸಾಂದ್ರತೆ ೪-೫ ಲಕ್ಷ ಸಸ್ಯಗಳು. ಕರ್ನಾಟಕದಲ್ಲಿ ಕಳೆದ ಹದಿನೈದು ವರುಷಗಳಲ್ಲಿ ಶಿಫಾರಸು ಮಾಡಿದ ಯಾ ಅಭಿವೃದ್ಧಿ ಪಡಿಸಿದ ನವಣೆಯ ತಳಿಗಳು ಪಂತ್ ಸೆಟೆರಿಯ ೪, ಹೆಚ್ಎಂಟಿ ೧೦೦-೧ ಮತ್ತು ಟಿಎನ್‌ಎಯು-೧೮೬ (ಇಲ್ಲಿ ಜನಪ್ರಿಯವಾದ ತಳಿಗಳು ಎಸ್‌ಐಎ-೩೨೬, ಪಿಎಸ್-೪ ಮತ್ತು ಟಿಎನ್‌ಎ-೧೮೬).[೮] ನಾಲ್ಕು ಸೆಂಟಿಮೀಟರ್‌ಗೂ ಹೆಚ್ಚು ಆಳಕ್ಕೆ ಬಿತ್ತನೆ ಮಾಡುವುದು ಬೇಡ.
- ಇತರ ಸಾಗುವಳಿ ವಿವರಗಳು: ಬಿತ್ತನೆಯ ನಂತರ ಕೈಯಿಂದ ಕಳೆ ತೆಗೆಯುವುದು ಮತ್ತು ಎರಡು ಮೂರು ಸಾರಿ ಅಂತರ ಬೇಸಾಯ ಅಗತ್ಯವಾಗುತ್ತದೆ. ಇದರ ರಸಗೊಬ್ಬರ ಅಗತ್ಯವೂ ಕಡಿಮೆಯೇ. ಹಾಗೆಯೇ ಇದಕ್ಕೆ ಭಾದಿಸುವ ಕೀಟ ಮತ್ತು ರೋಗಗಳು ಕಡಿಮೆಯಾದ್ದರಿಂದ ಸಸ್ಯ ಸಂರಕ್ಷಣೆಯ ಹೊರೆಯೂ ಕಡಿಮೆ.[೯] ಕೆಲವೊಮ್ಮೆ ಬಾಣತಿ ರೋಗ, ಕಾಡಿಗೆ ತೆನೆ (ಕಪ್ಪಾಗುವುದು) ತಗುಲುವುದಿದೆ. [೧೧]
- ಕೊಯ್ಲು ಮತ್ತು ಇಳುವರಿ: ಕಾಳು ಕಟ್ಟಿ ಗಟ್ಟಿಯಾದ ಮೇಲೆ ಬೆಳೆ ಕೊಯ್ಯಬೇಕು. ಮಳೆಯಾಧಾರಿತ ಬೆಳೆಯಲ್ಲಿ ಹೆಕ್ಟೇರಿಗೆ ೬-೮ ಕ್ವಿಂಟಾಲ್ ಧಾನ್ಯದ ಇಳುವರಿಯನ್ನು ನಿರೀಕ್ಷಿಸ ಬಹುದು.[೯]
ನವಣೆಯಲ್ಲಿ ಪ್ರೋಟೀನ್ ೧೨.೩ ಗ್ರಾಂ, ಹಾಗೂ ಅಕ್ಕಿಯಲ್ಲಿ ೬.೮೦ ಗ್ರಾಂ.ಅಂಶವಿದೆ.
Remove ads
ಬಳಕೆ
ತೆನೆಯನ್ನು ಕಣ ಮಾಡಿ ಕಾಳುಗಳನ್ನು ಪಡೆಯಲಾಗುತ್ತದೆ. ಭಾರತದಲ್ಲಿ ಧಾನ್ಯವು ಆಹಾರವಾಗಿ ಮತ್ತು ಕಾಂಡವು ಮೇವಾಗಿ ಬಳಕೆಯಾಗುತ್ತದೆ. ಧಾನ್ಯವನ್ನು ಇಡಿಯಾಗಿ ಅಥವಾ ನುಚ್ಚಾಗಿ ಅಕ್ಕಿಯಂತೆ ಅನ್ನ ಮಾಡಬಹುದು. ಹಿಟ್ಟನ್ನು ಹಾಗೆಯೇ ರೊಟ್ಟಿ ಮಾಡಬಹುದು ಅಥವಾ ಗೋದಿಯೊಂದಿಗೆ ಬೆರೆಸಿ ಹುಳಿಯಾಗಿಸಿದ ರೊಟ್ಟಿಯನ್ನಾಗಿ ಮಾಡಬಹುದು. ಚೀನಾದಲ್ಲಿ ಇದನ್ನು ದ್ವಿದಳ ಧಾನ್ಯಗಳೊಂದಿಗೆ ಬೆರಸಿ ಆಹಾರ ತಯಾರಿಸಲಾಗುತ್ತದೆ ಅಥವಾ ಅದರ ಹಿಟ್ಟನ್ನು ಇತರ ಏಕದಳ ಧಾನ್ಯದ ಹಿಟ್ಟಿನೊಂದಿಗೆ ಬೆರಸಿ ರೊಟ್ಟಿ ಅಥವಾ ನ್ಯೂಡೂಲ್‌ಗಳನ್ನು ಮಾಡಲಾಗುತ್ತದೆ. ಚೀನಾದಲ್ಲಿ ೧೯೯೦ರ ದಶಕದ ನಂತರದಲ್ಲಿ ನವಣೆಯನ್ನು ಚಿಪ್ಸ್ ತಯಾರಿಸಲು, ಮಕ್ಕಳ ಆಹಾರವಾಗಿ ಕೈಗಾರಿಕೆಯಲ್ಲಿ ಬಳಸಲಾಗುತ್ತಿದೆ. ರಶಿಯಾ ಮತ್ತು ಮೈನ್ಮಾರ್‌ಗಳಲ್ಲಿ (ಬರ್ಮಾ) ಇದನ್ನು ಬೀರು ಮತ್ತು ಮಧ್ಯಸಾರ ಪಾನೀಯಗಳ ತಯಾರಿಕೆಯಲ್ಲಿ ಬಳಸಿದರೆ ಚೀನಾದಲ್ಲಿ ವೈನ್ ಮತ್ತು ವಿನೇಗಾರ್ ತಯಾರಿಸಲು ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪಿನಲ್ಲಿ ಇದನ್ನು ಮುಖ್ಯವಾಗಿ ಹಕ್ಕಿಗಳ ಆಹಾರವಾಗಿ ಬಳಸಲಾಗುತ್ತದೆ. ಅಲ್ಲದೆ ಇದು ಪ್ರಮುಖ ಮೇವಿನ ಬೆಳೆ.[೫]
ನವಣೆಯಿಂದ ಕೆಳಗೆ ನಮೂದಿಸಿದ ಎಲ್ಲ ಖಾದ್ಯಗಳನ್ನೂ ಮಾಡಬಹುದು.
ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು, ಪೊಂಗಲ್, ತಾಲಿಪಟ್ಟು, ಹೋಳಿಗೆ, ಚಿಕ್ಕಿ, ಭಜಿಯ, ಬಿಸ್ಕೆಟ್, ಮುದ್ದೆ, ಗಂಜಿ ಇತ್ಯಾದಿಗಳನ್ನೆಲ್ಲಾ, 'ನವಣೆ' ಯಿಂದ ಮಾಡಬಹುದು.
ಉಲ್ಲೇಖಗಳು ಮತ್ತು ಟಿಪ್ಪಣಿಗಳು
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads