ಪಠ್ಯಪುಸ್ತಕ
From Wikipedia, the free encyclopedia
ಪಠ್ಯಪುಸ್ತಕವು ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನಿರ್ಮಿತವಾಗಿದ್ದು ನಿರ್ದಿಷ್ಟ ವ್ಯಾಸಂಗ ವಿಷಯವನ್ನು ಶಿಷ್ಟರೀತಿಯಲ್ಲಿ ತಿಳಿಸುವ ಪುಸ್ತಕ (ಟೆಕ್ಸ್ಟ್ ಬುಕ್). ಕಲಿವಿಗೂ ತರಗತಿಯ ಬಳಕೆಗೂ ಮನೆಯ ವ್ಯಾಸಂಗಕ್ಕೂ ಪರೀಕ್ಷೆ ಸಿದ್ಧತೆಗೂ ಅವರು ಇದನ್ನೇ ಅನುಸರಿಸುತ್ತಾರೆ. ಅಧ್ಯಾಪಕರೂ ಬಹುಮಟ್ಟಿಗೆ ಇದನ್ನೇ ಅನುಸರಿಸುತ್ತಾರೆ. ವಿಷಯದ ಪ್ರತಿಪಾದನೆ ಹಾಗೂ ಬೋಧನೆಗಳ ಕ್ರಮ, ವಿಷಯಪ್ರಮಾಣ ಮತ್ತು ವ್ಯಾಪ್ತಿ, ಶಿಕ್ಷಣಾಭಿವೃದ್ಧಿಯ ಪರೀಕ್ಷೆ-ಇವೆಲ್ಲಕ್ಕೂ ಅವರಿಗೆ ಇದೇ ಆಧಾರ. ಶಿಕ್ಷಣದಲ್ಲಿ ಇಷ್ಟೊಂದು ಪ್ರಭಾವವನ್ನು ಹೊಂದಿರುವ ಈ ಪ್ರಮುಖ ಪಾಠೋಪಕರಣದ ರಚನೆ, ಮುದ್ರಣ, ಆಯ್ಕೆ ಮತ್ತು ಬಳಕೆ ಆಸಕ್ತಿಯ ವಿಷಯಗಳೆನಿಸಿವೆ.
ಪಠ್ಯಪುಸ್ತಕ ಬರೆಯತಕ್ಕವರು ಆ ವಿಷಯದ ಪಾಂಡಿತ್ಯವುಳ್ಳವರಾಗಿರುವುದರಲ್ಲಿ ಜೊತೆಗೆ ಲೇಖನ ಕಲೆಯಲ್ಲೂ ಪರಿಶ್ರಮ ಹೊಂದಿರುವುದು ಅಗತ್ಯ. ಅದನ್ನು ಆಧರಿಸಿ ವಿದ್ಯಾಥಿಗಳ ಜ್ಞಾನರೂಪುಗೊಳ್ಳುವುದರಿಂದ ವಿಷಯ ನಿರ್ದೋಷವಾಗಿಯೂ ನಿರ್ವಿವಾದವಾಗಿಯೂ ಇರಬೇಕಾಗುತ್ತದೆ. ಅಲ್ಲದೆ ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ವಿಷಯವನ್ನು ಯಾವ ರೀತಿ ತಿಳಿಸಬೇಕು ಎಂಬುದು ಬಲು ಮುಖ್ಯವಾದ ವಿಚಾರ. ಅಲ್ಲಿನ ವಿಷಯ ಜ್ಞಾನವನ್ನು ವರ್ಧಿಸುವಂತಿರಬೇಕು. ಶೈಲಿ ಆಕರ್ಷಕವಾಗಿರಬೇಕು. ಶಬ್ದ ಭಂಡಾರ ಆಯಾ ವಯಸ್ಸಿನ ಮಕ್ಕಳ ಹಿಡಿತಕ್ಕೆ ನಿಲುಕುವಂತಿರಬೇಕು. ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಬಳಸಬಹುದಾದ ಪಠ್ಯಪುಸ್ತಕಗಳ ಬಗ್ಗೆ ಕೆಲವು ವಿವರಗಳನ್ನು ಮುಂದೆ ಕೊಡಲಾಗಿದೆ.
ಪುಸ್ತಕ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಭಾಗಗಳನ್ನು ಒಳಗೊಂಡಿರಬಹುದು ; ಅಥವಾ ಒಂದು ವಿಯಷಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪಾಠಗಳನ್ನೊಳಗೊಂಡಿರಬಹದು. ಒಂದು ದೀರ್ಘ ವಿಷಯನ್ನು ಕುರಿತ ಹಲವಾರು ಅಧ್ಯಾಯಗಳಿದ್ದರೆ ಒಂದೊಂದು ಭಾಗಕ್ಕೂ ಪ್ರತ್ಯೇಕವೂ ಉಚಿತವೂ ಆದ ಶೀರ್ಷಿಕೆ ಕೊಡುವುದರ ಜೊತೆ ಹಿಂದಿನ ಪಾಠಕ್ಕೂ ಮುಂದಿನ ಪಾಠಕ್ಕೂ ನಡುವೆ ಸಹಜ ಸಂಬಂಧ ಏರ್ಪಡುವಂತೆ ನೋಡಿಕೊಳ್ಳಬೇಕು. ಗ್ರಂಥದ ಒಟ್ಟು ವಿಷಯದಲ್ಲಿ ಒಂದು ಸಾಮರಸ್ಯವಿರಬೇಕು. ಒಂದೊಂದು ಪಾಠ ಅಥವಾ ಅಧ್ಯಾಯದಲ್ಲಿ ಹಲವಾರು ಭಾವನೆಗಳು ಬಂದಾಗ ಅವನ್ನು ಪ್ರತ್ಯೇಕ ಪ್ಯಾರಾಗಳಾಗಿ ಒಡೆಯಬೇಕು. ಆರಂಭದಲ್ಲಿ ಆ ಪಾಠ ಅಥವಾ ಅಧ್ಯಾಯದ ಮುಖ್ಯಾಂಶ ಸಂಗ್ರಹವಾಗಿ ನಮೂದಾಗಿರಬೇಕು. ಕೊನೆಯಲ್ಲಿ ಆ ಪಾಠದ ವಿಷಯ ಮತ್ತೊಮ್ಮೆ ಧ್ವನಿತವಾಗುವಂಥ ಮಾತುಗಳಿಂದ ಮುಕ್ತಾಯವಾಗಬೇಕು. ಪಾಠದ ಆರಂಭದಲ್ಲಿ ವಿಷಯದ ಸೂಚನೆಯಿದ್ದರೆ, ಮಧ್ಯ ಅದರ ವಿಸ್ತಾರ ನಿರೂಪಣೆ ಬರಬೇಕು. ಜೊತೆಗೆ ಪಾಠದಲ್ಲಿ ಯಾವ ಭಾವನೆಯನ್ನೂ ಅನಗತ್ಯವಾಗಿ ಅತಿಯಾಗಿ ಲಂಭಿಸಬಾರದು. ಪಾಠದ ಕೊನೆಯಲ್ಲಿ ಬೋಧನೆಗೂ ಕಲಿವಿಗೂ ಮನೆಯಲ್ಲಿ ಮತ್ತೆ ವಿಷಯವನ್ನು ಮನನ ಮಾಡಿಕೊಳ್ಳುವುದಕ್ಕೂ ಅಗತ್ಯವೆನಿಸಿದರೆ ಬೇರೆ ಪುಸ್ತಕವನ್ನು ತಂದು ಓದುವುದಕ್ಕೂ ಯುಕ್ತ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೂ ತಕ್ಕ ಅಭ್ಯಾಸ ಭಾಗ ಇರಬೇಕು.
ಪಾಠದಲ್ಲಿ ಬಳಸುವ ಭಾಷೆ ಸರಳವಾಗಿರಬೇಕು. ವಾಕ್ಯಗಳು ಅತಿ ದೀರ್ಘವಾಗಿರಬಾರದು, ಆಯಾ ಅಂತಸ್ತಿಗೆ ಮೀರಿದ ಪದಗಳನ್ನು ಸಾಧ್ಯವಾದ ಮಟ್ಟಿಗೆ ಬಳಸಬಾರದು. ಹೇಳತಕ್ಕ ವಿಷಯ, ನೀಡತಕ್ಕ ವಿವರಣೆ ಸ್ಪಷ್ಟಪಡುವಂತೆ ಉಚಿತರೀತಿಯ ಚಿತ್ರ, ನಕ್ಷೆ ಮುಂತಾದವನ್ನು ಸೇರಿಸಬಹುದು. ಪಾಠದ ವಿಷಯ ಸ್ಪಷ್ಟಪಡಿಸಬಲ್ಲ ಉದಾಹರಣೆ, ವಿವರಣೆ ಮುಂತಾದ ನಿದರ್ಶನಗಳನ್ನೂ ಬಳಸಬಹುದು. ಚಿಕ್ಕ ಮಕ್ಕಳ ಪಠ್ಯಪುಸ್ತಕಗಳಲ್ಲಂತೂ ಇವು ಅತ್ಯಗತ್ಯ.
ಪಠ್ಯ ಪುಸ್ತಕದ ವಿಷಯ ನಿರೂಪಣೆಯಂತೆ ಅದರ ಅಂಗ ರಚನೆಯು ಉಚಿತವಾಗಿರಬೇಕು. ಪುಸ್ತಕ ಒಳಮೈ ಆಕರ್ಷಕವಾಗಿದ್ದು ಓದಲು ಪ್ರಾತ್ಸಾಹ ನೀಡುವಂತಿರಬೇಕು. ವಯೋಗುಣಕ್ಕೆ ತಕ್ಕ ದೊಡ್ಡ ಅಕ್ಷರಗಳಲ್ಲಿ ಒಳ್ಳೆಯ ಕಾಗದದ ಮೇಲೆ ಕಪ್ಪು ಮಸಿಯಲ್ಲಿ ಅಚ್ಚಾಗಿರಬೇಕು. ಅಗತ್ಯವೆನಿಸಿದರೆ ಚಿತ್ರ, ನಕ್ಷೆ ಮುಂತಾದವು ಬಣ್ಣದವಾಗಿರಬೇಕಾಗುತ್ತದೆ. ಪುಟ ಮತ್ತು ಪಂಕ್ತಿಗಳುದ್ದ, ಪದ ಮತ್ತು ಪಂಕ್ತಿಗಳ ನಡುವಣ ಸ್ಥಳಾವಕಾಶ- ಇವು ಓದಲು ತೊಡಕಾಗದಂತೆಯೂ ಕಣ್ಣಿಗೆ ನೋವಾಗದಂತೆಯೂ ಇರಬೇಕು. ಪುಸ್ತಕದ ಆರಂಭದಲ್ಲಿ ವಿಷಯ ಸೂಚಿಯಿದ್ದು ಕೊನೆಯಲ್ಲಿ ಅಕಾರಾದಿ ವಿಷಯ ಸೂಚಿಯೂ ಆಯಾ ವಿಷಯದ ಪುಟಸಂಖ್ಯೆಯೂ ಇರುವುದು ಒಳ್ಳೆಯದು. ಪುಸ್ತಕದ ಒಳಮೈಯಂತೆ ಹೊರ ಮೈಯೂ ಆಕರ್ಷಕವಾಗಿರಬೇಕು. ಸಾಧ್ಯವಾದರೆ ಮುಖಪುಟಕ್ಕೆ ವರ್ಣರಂಜಿತ ಚಿತ್ರಗಳನ್ನು ಬಳಸಬಹುದು.
ಒಟ್ಟಿನಲ್ಲಿ ಪಠ್ಯಪುಸ್ತಕವಿಷಯ ಹಾಗೂ ವ್ಯಾಕರಣಗಳ ದೃಷ್ಟಿಯಿಂದ ನಿರ್ದಿಷ್ಟವಾಗಿರಬೇಕು.
ಅನೇಕ ದೇಶಗಳಲ್ಲಿ ಒಂದನೆಯ ತರಗತಿಗೂ ಒಂದೊಂದು ವಿಷಯದಲ್ಲೂ ಒಂದೊಂದೇ ಪಠ್ಯಪುಸ್ತಕವನ್ನು ಶಿಕ್ಷಣ ಶಾಖೆ ಅಥವಾ ಮಂಡಲಿ ಅಂಗೀಕರಿಸಿ ಗೊತ್ತು ಮಾಡುವುದು. ಆ ಕಾರ್ಯದಲ್ಲಿ ಎರಡು ವಿಧಾನಗಳು ಪ್ರಚಾರದಲ್ಲಿವೆ. ಸರ್ಕಾರ ಆ ಕಾರ್ಯಕ್ಕಾಗಿ ನೇಮಿಸಿದ ಸಮಿತಿ ಖಾಸಗಿ ಪ್ರಕಾಶಕರಿಂದಲೂ ಪುಸ್ತಕಗಳನ್ನು ತರಿಸಿಕೊಂಡು ಉತ್ತಮವಾದವನ್ನು ಆಯ್ಕೆಮಾಡುವುದು. ಅನಂತರ ಆಯ್ಕೆಯಾದ ಪುಸ್ತಕಗಳನ್ನು ಅಚ್ಚಿಸಿ ಸರ್ಕಾರ ಇಡೀ ದೇಶದ ಆ ಮಟ್ಟದ ಎಲ್ಲ ತರಗತಿಗಳಿಗೂ ಅಥವಾ ಶಾಲಾಮಂಡಲದ ಎಲ್ಲ ತರಗತಿಗಳಿಗೂ ಹಂಚುವುದು. ಕೆಲವು ದೇಶಗಳಲ್ಲಿ ಒಂದೊಂದು ವಿಷಯಕ್ಕೂ ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಗೊತ್ತುಮಾಡಿ ಅವುಗಳಲ್ಲಿ ಯಾವುದನ್ನಾದರೂ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಶಾಲೆಗೆ ನೀಡುವುದಿದೆ. ಎರಡನೆಯ ವಿಧದಲ್ಲಿ ಸರಕಾರವೇ ಒಂದೊಂದು ತರಗತಿಯ ಒಂದೊಂದು ವಿಷಯಕ್ಕೂ ರಚನಾ ಸಮಿತಿಯನ್ನು ನೇಮಿಸಿ ಪುಸ್ತಕ ಬರೆಯುವ ಕಾರ್ಯವನ್ನು ಅದಕ್ಕೆ ವಹಿಸುವುದು. ಆ ಸಮಿತಿಯಲ್ಲಿ ಆ ವಿಷಯದಲ್ಲಿ ತಜ್ಞರು, ಅದನ್ನು ಬೋಧಿಸತಕ್ಕ ಅಧ್ಯಾಪಕರು ಮನಃಶ್ಶಾಸ್ತ್ರಜ್ಞರು, ಮುದ್ರಣಕಾರರು ಇರುವರು. ಅವರು ರಚಿಸಿದ ಪುಸ್ತಕವನ್ನು ಮತ್ತೊಂದು ಸಮಿತಿ ವಿಮರ್ಶಿಸುವುದು. ಅನಂತರ ಅಗತ್ಯ ತಿದ್ದುಪಡಿಯೊಡನೆ ಪುಸ್ತಕವನ್ನು ಅಂಗೀಕರಿಸಿ ಮುದ್ರಿಸಿ ಶಾಲೆಗಳ ಉಪಯೋಗಕ್ಕಾಗಿ ಒದಗಿಸುವರು.