ವೀರ್ಯಾಣು
ಪುರುಷರ ಸಂತಾನೋತ್ಪತ್ತಿ ಜೀವಕೋಶಗಳು / From Wikipedia, the free encyclopedia
ವೀರ್ಯಾಣು ಎಂದರೆ ಪುರುಷರ ವೀರ್ಯದಲ್ಲಿ (ರೇತಸ್ಸು, ಧಾತು-ಸೀಮೆನ್) ಕಂಡುಬರುವ, ಪ್ರಜನನಕಾರಕವೆನಿಸುವ ಸೂಕ್ಷ್ಮಕೋಶ (ಸ್ಪರ್ಮ್). ಶುಕ್ಲಾಣು, ಶುಕ್ರಾಣು, ರೇತ್ರಾಣು ಎಂಬ ಹೆಸರುಗಳೂ ಇವೆ. ವೀರ್ಯಾಣುಗಳು ಪುರುಷ ಪ್ರಜನನಕೋಶವಾದ ವೃಷಣದಲ್ಲಿ (ಟೆಸ್ಟಿಕಲ್) ಉತ್ಪತ್ತಿ ಆಗುತ್ತವೆ.[1] ಒಂದೊಂದು ವೀರ್ಯಾಣುವಿನ ಉದ್ದ ಸುಮಾರು 50-60 ಮೈಕ್ರಾನುಗಳು (1 ಮೈಕ್ರಾನ್ = 1 ಮೀಟರಿನ ಒಂದು ದಶಲಕ್ಷ ಭಾಗ). ತಲೆಭಾಗ ದುಂಡಗೆ ದಪ್ಪವಾಗಿದ್ದು 5 ಮೈಕ್ರಾನುಗಳಷ್ಟು ಉದ್ದವಿರುತ್ತದೆ. ತಲೆಭಾಗವೇ ವೀರ್ಯಾಣುವಿನ ಕೇಂದ್ರಭಾಗ. ಇದಕ್ಕೆ ಸೇರಿದಂತೆ ಕತ್ತು ಮತ್ತು ಬಾಲಭಾಗಗಳಿವೆ. ಕತ್ತಿನ ಉದ್ದ ಸುಮಾರು 0.1 ಮೈಕ್ರಾನು. ಬಾಲದ ಸಹಾಯದಿಂದ ವೀರ್ಯಾಣುಗಳು ಚಲನವಲನಗಳನ್ನು ಪ್ರದರ್ಶಿಸುತ್ತವೆ.[2][3][4] ಇವು ಸ್ತ್ರೀ ಜನನೇಂದ್ರಿಯ ನಾಳದೊಳಗೆ ಹೋಗಿ ಅಲ್ಲಿರುವ ಲೋಳೆರಸದಲ್ಲಿ ಮಿನಿಟಿಗೆ 2-7 ಮಿಮೀ ದೂರದಲ್ಲಿ ಈಜಿಕೊಂಡು ಹೋಗಿ ಅಂಡಾಣುಗಳನ್ನು ಸಮೀಪಿಸಿ ಅವುಗಳೊಡನೆ ಮಿಲನಗೊಳ್ಳುತ್ತವೆ. ಈ ಕ್ರಿಯೆಗೆ 'ನಿಷೇಚನೆ' ಎಂದು ಹೆಸರು. ಒಂದು ಸಂಭೋಗದಲ್ಲಿ ಅನೇಕ ವೀರ್ಯಾಣುಗಳು ಯೋನಿಯನ್ನು ಪ್ರವೇಶಿಸಿದಾಗ ಅಲ್ಲಿ ಅಂಡಾಣುಗಳು ಸಿದ್ಧವಾಗಿದ್ದರೆ ಮಾತ್ರ ನಿಷೇಚನೆ ಜರಗುತ್ತದೆ. ವೀರ್ಯಾಣುಗಳು ಮನುಷ್ಯನ ಪ್ರವರ್ಧಮಾನ ಕಾಲದಿಂದ ಅಂದರೆ, 16-18ನೆಯ ವಯಸ್ಸಿನಿಂದ 60-65 ವಯಸ್ಸಿನ ತನಕವೂ ಉತ್ಪತ್ತಿಯಾಗುತ್ತಿರುತ್ತವೆ.