ಸಾಂಸ್ಥಿಕ ಆಡಳಿತ
From Wikipedia, the free encyclopedia
ಸಾಂಸ್ಥಿಕ ಅಡಳಿತ ಎಂಬುದು ಪ್ರಕ್ರಿಯೆಗಳು, ಪದ್ಧತಿಗಳು, ಕಾರ್ಯನೀತಿಗಳು, ಕಾನೂನುಗಳು, ಮತ್ತು ಸ್ಥಾಪಿತ ಪದ್ಧತಿಗಳ ಒಂದು ಸಂಕಲನವಾಗಿದೆ. ಒಂದು ಸಂಸ್ಥೆ ಅಥವಾ ಕಂಪನಿಯು ನಿರ್ದೇಶಿಸಲ್ಪಡುವ, ಆಡಳಿತಕ್ಕೆ ಒಳಗಾಗುವ ಅಥವಾ ನಿಯಂತ್ರಣಕ್ಕೆ ಒಳಪಡುವ ಮಾರ್ಗದ ಮೇಲೆ ಇದು ಪ್ರಭಾವ ಬೀರುತ್ತದೆ.
ಸಂಸ್ಥೆಯೊಂದರಲ್ಲಿ ತೊಡಗಿಸಿಕೊಂಡಿರುವ ಅನೇಕ ಮಧ್ಯಸ್ಥಗಾರರ ನಡುವಿನ ಸಂಬಂಧಗಳನ್ನು ಹಾಗೂ ಯಾವ ಗುರಿ ಅಥವಾ ಉದ್ದೇಶದ ಸಾಧನೆಗಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆಯೋ ಅವುಗಳನ್ನೂ ಸಹ ಸಾಂಸ್ಥಿಕ ಅಡಳಿತವು ಒಳಗೊಳ್ಳುತ್ತದೆ. ಷೇರುದಾರರು/ಸದಸ್ಯರು, ಆಡಳಿತ ಮಂಡಳಿ, ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರು ಪ್ರಧಾನ ಮಧ್ಯಸ್ಥಗಾರರಾಗಿರುತ್ತಾರೆ. ಇತರ ಮಧ್ಯಸ್ಥಗಾರರಲ್ಲಿ, ಕಾರ್ಮಿಕರು (ನೌಕರರು), ಗ್ರಾಹಕರು, ಸಾಲದಾತರು (ಉದಾ: ಬ್ಯಾಂಕುಗಳು, ಬಾಂಡ್ ಅಥವಾ ಕರಾರುಪತ್ರವನ್ನು ಹೊಂದಿದವರು), ಸರಬರಾಜುದಾರರು, ನಿಯಂತ್ರಕರು ಮತ್ತು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುತ್ತಾರೆ. ಲಾಭನಿರಪೇಕ್ಷ ಸಂಸ್ಥೆಗಳು ಅಥವಾ ಸದಸ್ಯತ್ವ ಆಧರಿತ ಇತರ ಸಂಘಟನೆಗಳಲ್ಲಿ "ಷೇರುದಾರರು" ಎಂದರೆ ಈ ಕೆಳಗಿನ ಪಠ್ಯದಲ್ಲಿ ನೀಡಿರುವ ಲಕ್ಷಣಗಳುಳ್ಳ (ಒಂದು ವೇಳೆ ಅನ್ವಯವಾಗುವುದಾದರೆ) "ಸದಸ್ಯರು" ಎಂದರ್ಥ.
ಸಾಂಸ್ಥಿಕ ಅಡಳಿತ ಎಂಬುದು ಒಂದು ಬಹುಮುಖೀಯ ವಿಷಯ.[1] ಪ್ರಧಾನ-ದಲ್ಲಾಳಿ ಸಮಸ್ಯೆಯನ್ನು ತಗ್ಗಿಸಲು ಅಥವಾ ತೆಗೆದುಹಾಕಲು ಪ್ರಯತ್ನಿಸುವ ಕಾರ್ಯವಿಧಾನ ಅಥವಾ ಕೌಶಲಗಳ ಮೂಲಕ, ಸಂಘಟನೆಯೊಂದರಲ್ಲಿನ ನಿರ್ದಿಷ್ಟ ವ್ಯಕ್ತಿಗಳ ಹೊಣೆಗಾರಿಕೆಯನ್ನು ದೃಢೀಕರಿಸುವುದು ಸಾಂಸ್ಥಿಕ ಆಡಳಿತದ ಪ್ರಮುಖ ವಿಷಯ ಎನಿಸಿಕೊಳ್ಳುತ್ತದೆ.
ಆರ್ಥಿಕ ದಕ್ಷತೆಯಲ್ಲಿ ಸಾಂಸ್ಥಿಕ ಆಡಳಿತ ವ್ಯವಸ್ಥೆಯೊಂದರ ಪ್ರಭಾವದ ಕುರಿತಾಗಿ ಚರ್ಚೆಗಳ ಒಂದು ಸಂಬಂಧಿತ ಆದರೆ ಪ್ರತ್ಯೇಕವಾದ ಎಳೆಯು ಗಮನಹರಿಸುತ್ತದೆ. ಇದು ಷೇರುದಾರರ ಹಿತರಕ್ಷಣೆಗೂ ಬಲವಾದ ಒತ್ತು ನೀಡುತ್ತದೆ. ಸಾಂಸ್ಥಿಕ ಆಡಳಿತ ವಿಷಯಕ್ಕೆ ಇನ್ನೂ ಅನೇಕ ಮಗ್ಗಲುಗಳಿವೆ. ವಿಶ್ವಾದ್ಯಂತವಿರುವ ಮಧ್ಯಸ್ಥಗಾರ ದೃಷ್ಟಿಕೋನ ಮತ್ತು ಸಾಂಸ್ಥಿಕ ಆಡಳಿತದ ಮಾದರಿಗಳನ್ನೂ ಇದು ಒಳಗೊಳ್ಳುತ್ತದೆ (ಕೆಳಗೆ ನೀಡಲಾದ 9ನೇ ವಿಭಾಗವನ್ನು ನೋಡಿ).
2001ರಿಂದಲೂ, ಆಧುನಿಕ ಸಂಸ್ಥೆಗಳ ಸಾಂಸ್ಥಿಕ ಆಡಳಿತದ ಅಭ್ಯಾಸಗಳು ಅಥವಾ ಆಚರಣೆಗಳಲ್ಲಿ ನವೀಕೃತ ಆಸಕ್ತಿಯು ಕಂಡುಬರುತ್ತಿದೆ. ಎನ್ರಾನ್ ಕಾರ್ಪೊರೇಷನ್ ಮತ್ತು MCI ಇಂಕ್. (ಇದಕ್ಕೂ ಮುಂಚೆ ಇದನ್ನು WorldCom ಎಂದು ಕರೆಯಲಾಗುತ್ತಿತ್ತು)ನಂತಹ U.S.ನ ಅಸಂಖ್ಯಾತ ಬೃಹತ್ ಸಂಸ್ಥೆಗಳು ಗಮನ ಸೆಳೆಯುವ ರೀತಿಯಲ್ಲಿ ಕುಸಿದಿದ್ದೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು.
ಸಾಂಸ್ಥಿಕ ಆಡಳಿತದ ಕುರಿತು ಸಾರ್ವಜನಿಕರಲ್ಲಿ ಮತ್ತೊಮ್ಮೆ ವಿಶ್ವಾಸವನ್ನು ಮೂಡಿಸುವ ದೃಷ್ಟಿಯಿಂದ, U.S. ಒಕ್ಕೂಟ ಸರ್ಕಾರವು 2002ರಲ್ಲಿ ಸಾರ್ಬೇನ್ಸ್-ಆಕ್ಸ್ಲೆ ಕಾಯಿದೆಯನ್ನು ಅನುಮೋದಿಸಿತು.