ಸಾಪೇಕ್ಷತ ಸಿದ್ಧಾಂತ
From Wikipedia, the free encyclopedia
ಸಾಪೇಕ್ಷತಾ ಸಿದ್ಧಾಂತ ವಿಜ್ಞಾನದಲ್ಲಿ ಬಹು ಚರ್ಚಿತ ಸಿದ್ಧಾಂತಗಳಲ್ಲಿ ಪ್ರಮುಖವಾದುದು. ಇದು ಮೂಲಭೂತವಾಗಿ ಎರಡು ವಿಭಾಗಗಳಲ್ಲಿ ಪ್ರಕಟಗೊಂಡಿದೆ. ಪ್ರಥಮವಾಗಿ ಐನ್ಸ್ಟೈನ್ರವರು ೧೯೦೫ ರಲ್ಲಿ 'ವಿಶೇಷ ಸಾಪೇಕ್ಷತಾ ಸಿದ್ಧಾಂತ' ಎಂದು ಪ್ರಕಟಿಸಿದರು. ಎರಡನೆಯದಾಗಿ ೧೯೧೫ರಲ್ಲಿ 'ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ' ಎಂದು ಪ್ರಕಟಿಸಿದರು.[1] ಸಾಪೇಕ್ಷತಾ ಸಿದ್ಧಾಂತವು ಪ್ರಕೃತಿಯ ಸಕಲ ಘಟನೆಗಳ ಹಿಂದಿನ ಮೂಲಭೂತ ವಿಚಾರಗಳಿಗೆ ಸಮರ್ಪಕ ಉತ್ತರವನ್ನು ನೀಡುತ್ತದೆ. ಈ ವಿಚಾರಗಳೆಂದರೆ ಕಾಲ, ಚಲನೆ, ದ್ರವ್ಯರಾಶಿ, ಅವಕಾಶ (ಆಕಾಶ - ದೇಶ -space) ಮತ್ತು ಗುರುತ್ವಶಕ್ತಿ. ಮೊದಲನೆಯದರಲ್ಲಿ ಗುರುತ್ವಾಕರ್ಷಣೆಯ ಅಧ್ಯಯನವಿಲ್ಲ. ಎರಡನೆಯದು ವಿಶ್ವಬಲಗಳ, ಮುಖ್ಯವಾಗಿ ಗುರುತ್ವಾಕರ್ಷಣೆಯ ಅನಿರ್ಬಂಧಿತ ಅಧ್ಯಯನ ಮಾಡುತ್ತದೆ.[2] ಹೀಗೆ ಐನ್ಸ್ಟೈನ್ ಆಧುನಿಕ ಭೌತವಿಜ್ಞಾನದ (ಮಾಡರ್ನ್ ಫಿಸಿಕ್ಸ್) ಮೂವರು ಹರಿಕಾರರಲ್ಲಿ ಒಬ್ಬರು. ಉಳಿದಿಬ್ಬರು ಪ್ಲಾಂಕ್ ಮತ್ತು ಬೋರ್.
ಐಸಾಕ್ ನ್ಯೂಟನ್ (1642-1727) ಅಭಿಜಾತ ಭೌತವಿಜ್ಞಾನದ (ಕ್ಲಾಸಿಕಲ್ ಫಿಸಿಕ್ಸ್) ಪ್ರವರ್ತಕ. ಸಮಸ್ತ ಭೌತವಿದ್ಯಮಾನಗಳೂ ಆಕಾಶ-ಕಾಲ ವ್ಯಾಪ್ತಿಯಲ್ಲಿ ಜರಗುತ್ತವೆ. ಇವನ್ನು ಖಚಿತವಾಗಿ ಗುರುತಿಸಿ, ಮಾಪಿಸಿ, ಗಣಿತ ಪರಿಭಾಷೆಯಲ್ಲಿ ನಿರೂಪಿಸುವ ಸಲುವಾಗಿ ಆತ ನಿರ್ದಿಷ್ಟ ನಿರ್ದೇಶಕ ಚೌಕಟ್ಟನ್ನು (ಫ್ರೇಮ್ ಆಫ್ ರೆಫರೆನ್ಸ್) ವ್ಯಾಖ್ಯಿಸಿ ಯುಕ್ತ ಗಣಿತವನ್ನು ರೂಪಿಸಿದ. ನ್ಯೂಟನ್ ಅಂಗೀಕರಿಸಿದ ಅಭಿಗೃಹೀತಗಳು ಮೂರು: ಆಕಾಶ ಮತ್ತು ಕಾಲ ಎರಡೂ ಪರಸ್ಪರ ನಿರಪೇಕ್ಷಗಳು; ಅವುಗಳ ಸ್ವರೂಪ ಮತ್ತು ರಚನೆ ಭೌತಕಾಯಗಳನ್ನಾಗಲೀ ಭೌತವ್ಯಾಪಾರಗಳನ್ನಾಗಲೀ ಅವಲಂಬಿಸಿರುವುದಿಲ್ಲ; ಆಕಾಶ ಮತ್ತು ಕಾಲ ನಿರುಪಾಧಿಕಗಳು. ಈ ಅಭಿಗೃಹೀತಗಳನ್ನು ಆಧರಿಸಿ ಭೌತವಿಶ್ವದಲ್ಲಿಯ ಸಮಸ್ತ ವಿದ್ಯಮಾನಗಳನ್ನೂ ನಿರೂಪಿಸುವುದು ಸಾಧ್ಯ ಎಂಬುದು ನ್ಯೂಟನ್ನನ ದೃಢ ನಂಬಿಕೆ. ಹೀಗೆ ಮುನ್ನಡೆದ ಈ ನವಮನ್ವಂತರಪ್ರವರ್ತಕ ಪ್ರತಿಭೆ ಮುಂದಿನ ಶತಮಾನಗಳಲ್ಲಿ ವಿಜ್ಞಾನದ ವಿಸ್ತಾರ ಮತ್ತು ಗಹನ ಅಭಿವರ್ಧನೆಗೆ ಭದ್ರ ಬುನಾದಿ ಹಾಕಿತು.
ಇಂಥ ಪರ್ಯಾಪ್ತಸ್ಥಿತಿಯಲ್ಲಿ ಮ್ಯಾಕ್ಸ್ವೆಲ್ (1831-79) ವಿದ್ಯುತ್ಕಾಂತ ಕ್ಷೇತ್ರ (ಎಲೆಕ್ಟ್ರೊಮ್ಯಾಗ್ನೆಟಿಕ್ ಫೀಲ್ಡ್) ಪರಿಕಲ್ಪನೆಯನ್ನು ಮಂಡಿಸಿದ (1864). ಇದನ್ನು ನ್ಯೂಟನ್ ಚೌಕಟ್ಟಿನಲ್ಲಿ ಅಳವಡಿಸುವುದು ಸುಲಭಸಾಧ್ಯವಾಗಲಿಲ್ಲ. ಅಂದಿನ ವಿಜ್ಞಾನಿಗಳಲ್ಲಿ ನ್ಯೂಟನ್- ಸಿದ್ಧಾಂತದ ಸರ್ವಂಕಷತೆ ಮತ್ತು ಅಜೇಯತೆ ಬಗ್ಗೆ ಇನಿತೂ ಸಂದೇಹವಿರದಿದ್ದರಿಂದ ಈಥರಿನ ಪರಿಕಲ್ಪನೆಯನ್ನು ಮ್ಯಾಕ್ಸ್ವೆಲ್ ಪರಿಕಲ್ಪನೆಗೆ ಹೊಂದಿಸಲಾಯಿತು. ಇದರ ಪ್ರಕಾರ ಈಥರ್ ವಿಶ್ವವ್ಯಾಪಿಯೂ ಬಲು ತೆಳುವೂ ಆದ ಸ್ಥಾಯೀಪದಾರ್ಥ. ಇದರಲ್ಲಿ ಉಂಟಾಗುವ ಸ್ಥಳೀಯ ಚಲನೆಗಳೇ ವಿದ್ಯುತ್ಕಾಂತ ತರಂಗಗಳು ಪ್ರವಹಿಸುವುದರ ಕಾರಣ ಎಂದು ಭಾವಿಸಲಾಯಿತು.
ಅಂದ ಮೇಲೆ ಈಥರನ್ನೇ ನಿರಪೇಕ್ಷ ಆಕಾಶವೆಂದು ಪರಿಗಣಿಸಿ ಅದರ ಅಸ್ತಿತ್ವವನ್ನು ಸ್ಥಾಪಿಸಿದ್ದಾದರೆ ನ್ಯೂಟನ್-ಪ್ರಣೀತ ನಿರಪೇಕ್ಷ ಆಕಾಶ ಪರಿಕಲ್ಪನೆ ಸ್ಥಿರವಾಗುವುದೆಂದು ತರ್ಕಿಸಲಾಯಿತು. ಈಥರಿನ ಭೌತ ಅಸ್ತಿತ್ವವನ್ನು ರುಜುವಾತಿಸಲು ಮೈಕಲ್ಸನ್ ಮತ್ತು ಮಾರ್ಲೆ 1887ರಲ್ಲಿ ಒಂದು ಸಂಕೀರ್ಣ ಮತ್ತು ಸೂಕ್ಷ್ಮ ಪ್ರಯೋಗ ಮಾಡಿದರು. ಆದರೆ ಅದು ಸಫಲವಾಗಲಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಐನ್ಸ್ಟೈನ್ ತಮ್ಮ ಕ್ರಾಂತಿಕಾರಕ ಮೂಲಭೂತ ಸಂಶೋಧನೆಯನ್ನು ಪ್ರಕಟಿಸಿದರು (1905). ಇದೇ ವಿಶೇಷ ಸಾಪೇಕ್ಷತಾ ಸಿದ್ಧಾಂತ.