ಎರಡನೇ ಎಲಿಜಬೆಥ್
From Wikipedia, the free encyclopedia
ಎರಡನೇ ಎಲಿಜಬೆಥ್(ಎಲಿಜಬೆಥ್ ಅಲೆಕ್ಸಾಂಡ್ರ ಮೇರಿ ; ೨೧,ಏಪ್ರಿಲ್ ೧೯೨೬-೮ ಸೆಪ್ಟೆಂಬರ್ ೨೦೨೨) ಯುನೈಟೆಡ್ ಕಿಂಗ್ಡಮ್ ನ ಮಹಾರಾಣಿಯಾಗಿ ೬, ಫೆಬ್ರವರಿ ೧೯೫೨ ರಿಂದ ೮, ಸೆಪ್ಟೆಂಬರ್ ೨೦೨೨ ರಲ್ಲಿ ಮರಣಿಸುವವರೆಗೂ ಅಧಿಕಾರದಲ್ಲಿದ್ದರು.[a] (ಜನನ: ಏಪ್ರಿಲ್ ೨೧, ೧೯೨೬-ಮರಣ: ಸೆಪ್ಟೆಂಬರ್ ೮, ೨೦೨೨[1]) ಯುನೈಟೆಡ್ ಕಿಂಗ್ಡಮ್ ಮತ್ತು ೧೫ ಇತರ ದೇಶಗಳ ರಾಣಿ. ಈಕೆ ತಂದೆ ಆರನೇ ಜಾರ್ಜ್ನ ನಿಧನದ ನಂತರ ಯುನೈಟೆಡ್ ಕಿಂಗ್ಡಮ್ನ ಪಟ್ಟಕ್ಕೆ ಬಂದು ಜೂನ್ ೨, ೧೯೫೩ರಂದು ಪಟ್ಟಧಾರಣೆ ಮಾಡಿದರು. ಯುನೈಟೆಡ್ ಕಿಂಗ್ಡಮ್ ಅಲ್ಲದೆ ಕೆನಡ, ಆಸ್ಟ್ರೇಲಿಯ, ನ್ಯೂ ಜೀಲ್ಯಾಂಡ್, ಜಮೈಕ, ಬಾರ್ಬಡೋಸ್, ಬಹಾಮಾಸ್, ಗ್ರೆನಾಡ, ಪಾಪುಅ ನ್ಯೂ ಗಿನಿ, ಸಾಲೊಮನ್ ದ್ವೀಪಗಳು, ತುವಾಲು, ಸೇಂಟ್ ಲೂಷಿಯ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಬೆಲೀಜ್, ಆಂಟಿಗುವ ಮತ್ತು ಬಾರ್ಬುಡ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ರಾಷ್ಟ್ರಗಳ ರಾಣಿ ಕೂಡ. ೫೪ ರಾಷ್ಟ್ರಗಳು ಸದಸ್ಯರಾಗಿರುವ ಕಾಮನ್ವೆಲ್ತ್ ಒಕ್ಕೂಟದ ಮುಖಂಡಳು ಈಕೆ. ಇಂಗ್ಲೆಂಡಿನ ಚರ್ಚಿನ ಸುಪ್ರೀಮ್ ಗವರ್ನರ್ ಕೂಡ ಆಗಿರುವರು. ಎಲಿಜಬೆತ್ರ ಶಿಕ್ಷಣ ಖಾಸಗಿಯಾಗಿ ಮನೆಯಲ್ಲಿಯೇ ನಡೆಯಿತು. ೧೯೩೬ರಲ್ಲಿ ಆಕೆಯ ತಂದೆ ಆರನೆಯ ಜಾರ್ಜ್ ಆಗಿ ಪಟ್ಟವನ್ನೇರಿದರು. ಎಲಿಜಬೆತ್ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಆಕ್ಸಿಲರಿ ಟೆರಿಟೋರಿಯಲ್ ಸರ್ವೀಸ್(Auxiliary Territorial Service) ನಲ್ಲಿಯೂ ಸೇವೆ ಸಲ್ಲಿಸಿದರು. ೧೯೫೨ರಲ್ಲಿ ಆಕೆಯ ತಂದೆ ತೀರಿಹೋದ ನಂತರ ಎಲಿಜಬೆತ್ ಕಾಮನ್ವೆಲ್ತ್ನ ಮುಖಂಡಳಾಗಿಯೂ, ಎಂಟು ಸ್ವತಂತ್ರ ಕಾಮನ್ವೆಲ್ತ್ ರಾಷ್ಟ್ರಗಳಾದ - ಯುನೈಟೆಡ್ ಕಿಂಗ್ಡಮ್, ಕೆನಡ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕ, ಪಾಕಿಸ್ತಾನ್ ಹಾಗೂ ಸಿಲೋನ್- ಗಳ ರಾಣಿಯಾಗಿ ಪಟ್ಟವೇರಿದರು. ೧೯೬೩ರಲ್ಲಿ ಈಕೆಯ ಪಟ್ಟಾಭಿಷೇಕದ ದೂರದರ್ಶನ ಪ್ರಸಾರವೇ ಮೊಟ್ಟ ಮೊದಲನೆಯದು. ಬ್ರಿಟೀಷ್ ರಾಜಮನೆತನದಲ್ಲಿನ ಎರಡನೆಯ ದೀರ್ಘಾವಧಿ ಆಳ್ವಿಕೆ ಎಂದು ಪರಿಗಣಿತವಾಗಿರುವ ೫೯ ವರ್ಷದ ಈಕೆಯ ಆಳ್ವಿಕೆಯಲ್ಲಿ ಇತರೆ ೨೫ ರಾಷ್ಟ್ರಗಳು ಸ್ವತಂತ್ರವಾಗಿ ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದವು. ೧೯೫೨ ರಿಂದ ೧೯೯೨ರ ನಡುವಿನ ಅವಧಿಯಲ್ಲಿ ಇವುಗಳಲ್ಲಿ ಅರ್ಧದಷ್ಟು ರಾಷ್ಟ್ರಗಳು - ದಕ್ಷಿಣ ಆಫ್ರಿಕ, ಪಾಕಿಸ್ತಾನ್, ಸಿಲೋನ್ (ಶ್ರೀಲಂಕ ಎಂದು ಮರುನಾಮಕರಣಗೊಂಡಿತು) ಸೇರಿದಂತೆ - ಗಣರಾಜ್ಯಗಳಾದವು. ೧೯೭೭ ಮತ್ತು ೨೦೦೨ರಲ್ಲಿ ಈಕೆಯ ಆಳ್ವಿಕೆಯ ರಜತ ಹಾಗೂ ಸುವರ್ಣ ಮಹೋತ್ಸವಗಳನ್ನು ಆಚರಿಸಲಾಯ್ತು; ೨೦೧೨ರಲ್ಲಿ ವಜ್ರ ಮಹೋತ್ಸವದ ಆಚರಣೆಗೆ ಸಿದ್ಧತೆಗಳು ಪ್ರಾರಂಭವಾಗಿವೆ. ೧೯೪೭ರಲ್ಲಿ ಈಕೆ ಎಡಿನ್ ಬರೋದ ಡ್ಯೂಕ್ ಪ್ರಿನ್ಸ್ ಫಿಲಿಪ್ರನ್ನು ವರಿಸಿದರು. ಇವರಿಗೆ ಚಾರ್ಲ್ಸ್, ಅನ್ನೆ, ಆಂಡ್ರ್ಯು ಹಾಗೂ ಎಡ್ವರ್ಡ್ ಜನಿಸಿದರು. ದಾರುಣ ವರ್ಷ (annus horribilis ) ಎಂದು ಈಕೆ ಕರೆದ ೧೯೯೨ರಲ್ಲಿ ಚಾರ್ಲ್ಸ್ ಹಾಗೂ ಆಂಡ್ರ್ಯು ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿದರು, ಅನ್ನೆ ವಿಚ್ಛೇದನ ಪಡೆದರು, ಭೀಕರವಾದ ಬೆಂಕಿಗೆ ವಿಂಡ್ಸರ್ ಕೋಟೆ ಭಾಗಶಃ ಆಹುತಿಯಾಯಿತು. ಚಾರ್ಲ್ಸ್ ಮತ್ತು ವೇಲ್ಸ್ನ ರಾಜಕುವರಿ ಡಯಾನ ಮದುವೆಯಲ್ಲೂ ಈ ಸರಣಿ ಮುಂದುವರೆದು ೧೯೯೬ರಲ್ಲಿ ಅವರು ಬೇರೆಯಾದರು. ಮುಂದಿನ ವರ್ಷವೇ ಪ್ಯಾರಿಸಿನ ಕಾರು ಅಪಘಾತದಲ್ಲಿ ಡಯಾನ ಮೃತರಾದರು. ಈ ಸಂದರ್ಭದಲ್ಲಿ ರಾಜಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ವರ್ತಿಸಿದ ರೀತಿ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಒಳಗಾಯಿತು. ಆದರೆ ಎಲಿಜಬೆತ್ರ ಜನಪ್ರಿಯತೆ ಸಾರ್ವಜನಿಕವಾಗಿ ಆಕೆ ಕಾಣಿಸಿಕೊಂಡ ನಂತರ ಮರುಕಳಿಸಿತು ಮತ್ತು ಇಂದಿಗೂ ಅದು ಎತ್ತರದಲ್ಲಿಯೇ ಇದೆ.